
ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನಿಸುವ ಘಟನೆಯೊಂದಕ್ಕೆ ಭಾರತ ಮತ್ತು ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಸಾಕ್ಷಿಯಾಗಿದೆ. ಕೇವಲ 19 ಎಸೆತಗಳಲ್ಲಿ ಭರ್ಜರಿ 50 ರನ್ ಚಚ್ಚಿ ಸಂಭ್ರಮಿಸಿದ್ದ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅರ್ಧಶತಕವನ್ನು ಪಂದ್ಯದ ನಂತರ ಅಧಿಕೃತ ದಾಖಲೆಯಿಂದ ಕೈಬಿಡಲಾಗಿದೆ. ಅಲ್ಲದೆ ಅವರ ಸ್ಕೋರ್ ಅನ್ನು 50 ರಿಂದ 49 ರನ್‌ಗಳಿಗೆ ಪರಿಷ್ಕರಿಸಲಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 20 ಓವರ್ಗಳಲ್ಲಿ 182 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಸ್ಫೋಟಕ ಇನಿಂಗ್ಸ ಆಡಿದ್ದರು. ಈ ಇನಿಂಗ್ಸ್ ಮೂಲಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬೆನ್ನಲ್ಲೇ ವಿಕೆಟ್ ಅಭಿಷೇಕ್ ವಿಕೆಟ್ ಒಪ್ಪಿಸಿದ್ದರು.
ಆದರೆ ಈ ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ಅವರ ರನ್ ಖಾತೆಯಿಂದ ಒಂದು ರನ್ ಮೈನಸ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಲೆಗ್ ಬೈ ರನ್.
ಭಾರತ ತಂಡದ ಬ್ಯಾಟಿಂಗ್ ಚೇಸಿಂಗ್ ವೇಳೆ, ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಲೆಗ್ ಸೈಡ್‌ನಲ್ಲಿ ಶಾರ್ಟ್ ಬಾಲ್ ಒಂದನ್ನು ಪುಲ್ ಮಾಡಲು ಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ಗೆ ತಗುಲದೆ, ಥೈ ಪ್ಯಾಡ್‌ಗೆ ಬಡಿದು ಫೈನ್ ಲೆಗ್ ಕಡೆಗೆ ಹೋಗಿತ್ತು. ಆ ವೇಳೆ ಅವರು 1 ರನ್ ಓಡಿದ್ದರು. ಮೈದಾನದಲ್ಲಿದ್ದ ಸ್ಕೋರರ್‌ಗಳು ಆರಂಭದಲ್ಲಿ ಇದನ್ನು ಅಭಿಷೇಕ್ ಶರ್ಮಾ ಅವರ ಖಾತೆಗೆ ರನ್ ಎಂದು ತಪ್ಪಾಗಿ ದಾಖಲಿಸಿದ್ದರು.
ಲೈವ್ ಸ್ಕೋರ್ ಬೋರ್ಡ್ ನಂಬಿದ ಅಭಿಷೇಕ್ ಶರ್ಮಾ, ತಾವು ಎದುರಿಸಿದ 19ನೇ ಎಸೆತದಲ್ಲಿ ಸಿಂಗಲ್ ತೆಗೆದು ಅರ್ಧಶತಕದ ಸಂಭ್ರಮಾಚರಣೆ ಮಾಡಿದ್ದರು. ಆದರೆ, ಅದರ ಮರು ಎಸೆತದಲ್ಲೇ ಅವರು ಔಟಾದರು.
ಅಭಿಷೇಕ್ ಶರ್ಮಾ ಅವರು ಪೆವಿಲಿಯನ್‌ಗೆ ಮರಳಿದ ಬಳಿಕ, ಐಸಿಸಿ ನಿಯಮಾವಳಿ ಪ್ರಕಾರ ಪಂದ್ಯದ ಅಧಿಕಾರಿಗಳು ವಿಡಿಯೋ ದೃಶ್ಯಾವಳಿಗಳನ್ನು ಮರುಪರಿಶೀಲಿಸಿದರು. ಈ ಪರಿಶೀಲನೆ ವೇಳೆ 1 ರನ್ ಬ್ಯಾಟ್‌ನಿಂದ ಬಂದಿದ್ದಲ್ಲ, ಬದಲಿಗೆ ‘ಲೆಗ್ ಬೈ’ ಎಂದು ಸಾಬೀತಾಯಿತು. ಇದರಿಂದಾಗಿ ಭಾರತ ತಂಡದ ಒಟ್ಟು ಸ್ಕೋರ್ ಹಾಗೇ ಉಳಿದರೂ, ಅಭಿಷೇಕ್ ಅವರ ವೈಯಕ್ತಿಕ ಸ್ಕೋರ್ 49 ರನ್‌ಗೆ ಇಳಿಯಿತು.
ಇದನ್ನೂ ಓದಿ: ಸೌತ್ ಆಫ್ರಿಕಾ ಎಷ್ಟು ರನ್ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?
ಈ ಪಂದ್ಯದಲ್ಲಿ ಅರ್ಧಶತಕ ಕೈತಪ್ಪಿದರೂ ಅಭಿಷೇಕ್ ಶರ್ಮಾ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮ್ಯಾಚ್ನಲ್ಲಿ ಕಲೆಹಾಕಿದ 49 ರನ್ಗಳೊಂದಿಗೆ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 1000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇವಲ 528 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ಭಾರತದವರೇ ಆದ ಸೂರ್ಯಕುಮಾರ್ ಯಾದವ್ (573 ಎಸೆತಗಳು) ಅವರ ಹೆಸರಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಅಭಿಷೇಕ್ ಶರ್ಮಾ ಧೂಳೀಪಟ ಮಾಡಿದ್ದಾರೆ.