ಒಮಾನ್ನಲ್ಲಿ ನಡೆಯುತ್ತಿರುವ ಉದಯೋನ್ಮುಖ ಟೀಂ ಟಿ20 ಏಷ್ಯಾಕಪ್ 8ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಒಮಾನ್ನ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಉಭಯ ತಂಡಗಳಿಗೂ ಎರಡನೇ ಪಂದ್ಯವಾಗಿದ್ದು, ಇನ್ನು ಈ ಪಂದ್ಯವನ್ನು ಕೇವಲ 10.5 ಓವರ್ಗಳಲ್ಲಿ 7 ವಿಕೆಟ್ಗಳಿಂದ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ತಂಡ 107 ರನ್ಗಳಿಗೆ ಆಲೌಟ್ ಆದರೆ, ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿರುವ ಟೀಂ ಇಂಡಿಯಾ ಸೆಮಿಫೈನಲ್ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಗುಂಪಿನಲ್ಲಿ ಟೀಂ ಇಂಡಿಯಾ ಅಲ್ಲದೆ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ತಂಡಗಳಿದ್ದು, ತಿಲಕ್ ವರ್ಮಾ ಪಡೆ ಲೀಗ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಒಮಾನ್ ವಿರುದ್ಧ ಆಡಲಿದೆ. ಆ ಬಳಿಕ ಸೆಮಿಫೈನಲ್ ಪಂದ್ಯಕ್ಕೆ ಅಣಿಯಾಗಲಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 16.5 ಓವರ್ಗಳಲ್ಲಿ 107 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಾಹುಲ್ ಚೋಪ್ರಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ನಾಯಕ ಬಸಿಲ್ ಹಮೀದ್ ಕೂಡ 22 ರನ್ಗಳ ಕಾಣಿಕೆ ನೀಡಿದರು. ಉಳಿದವರಂತೆ ಅಂತಹ ಪ್ರದರ್ಶನ ಕಂಡುಬರಲಿಲ್ಲ. ಭಾರತದ ಪರ ಮಿಂಚಿದ ವೇಗದ ಬೌಲರ್ ರಾಸಿಖ್ ಸಲಾಂ 2 ಓವರ್ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರು. ರಾಸಿಖ್ ಸಲಾಂ ಅವರು ತಮ್ಮ ಮೊದಲ ಓವರ್ನಲ್ಲಿಯೇ ಈ ಮೂರು ವಿಕೆಟ್ಗಳನ್ನು ಪಡೆದರು. ಇವರಲ್ಲದೆ ರಮಣದೀಪ್ ಸಿಂಗ್ 2 ವಿಕೆಟ್ ಪಡೆದರೆ, ಅನ್ಶುಲ್ ಕಾಂಬೋಜ್, ವೈಭವ್ ಅರೋರಾ, ಅಭಿಷೇಕ್ ಶರ್ಮಾ ಮತ್ತು ನೆಹಾಲ್ ವಧೇರಾ ತಲಾ 1 ವಿಕೆಟ್ ಪಡೆದರು.
The Men in Blue cruise to victory, chasing down 107 with 7 wickets to spare! A dominant all-round performance seals the win for India ‘A’! 🙌#MensT20EmergingTeamsAsiaCup2024 #ACC pic.twitter.com/WzQ9cUGsbf
— AsianCricketCouncil (@ACCMedia1) October 21, 2024
ಪಂದ್ಯ ಗೆಲ್ಲಲು ಟೀಂ ಇಂಡಿಯಾ 108 ರನ್ ಗಳಿಸಬೇಕಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಅರ್ಧಶತಕ ದಾಖಲಿಸಿದರು. ಹೀಗಾಗಿ ಈ ಗುರಿಯನ್ನು ಟೀಂ ಇಂಡಿಯಾ ಕೇವಲ 10.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಾಧಿಸಿತು. ಅಭಿಷೇಕ್ ಶರ್ಮಾ ಕೇವಲ 24 ಎಸೆತಗಳಲ್ಲಿ 241.66 ಸ್ಟ್ರೈಕ್ ರೇಟ್ನಲ್ಲಿ 58 ರನ್ ಗಳಿಸಿದರು. ಅಭಿಷೇಕ್ ಶರ್ಮಾ ಅವರ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದ್ದವು. ಅದೇ ಸಮಯದಲ್ಲಿ ನಾಯಕ ತಿಲಕ್ ವರ್ಮಾ ಕೂಡ 18 ಎಸೆತಗಳಲ್ಲಿ 21 ರನ್ಗಳ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Mon, 21 October 24