RCB vs GT; ಆರ್ಸಿಬಿ ವಿರುದ್ಧ ಶತಕ ಬಾರಿಸಿ ದಾಖಲೆ ನಿರ್ಮಿಸಿದ ಸಾಯಿ ಸುದರ್ಶನ್
Sai Sudharsan's IPL 2026 Century: ಐಪಿಎಲ್ 2026 ರಲ್ಲಿ ಆರ್ಸಿಬಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಯಿ ಸುದರ್ಶನ್ ಅದ್ಭುತ ಶತಕ ಬಾರಿಸಿದರು. ಇದು ಅವರ ಮೂರನೇ ಐಪಿಎಲ್ ಶತಕವಾಗಿದೆ. 57 ಎಸೆತಗಳಲ್ಲಿ ಶತಕ ಪೂರೈಸಿದ ಸುದರ್ಶನ್, ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರೈಸಿದ ದಾಖಲೆ ನಿರ್ಮಿಸಿದರು. ಗುಜರಾತ್ ಟೈಟಾನ್ಸ್‌ನ ಈ ಆರಂಭಿಕ ಆಟಗಾರ ಕ್ರಿಸ್ ಗೇಲ್ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದರು.

ಆರ್ಸಿಬಿ (RCB) ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ (Sai Sudharsan) ಅದ್ಭುತ ಶತಕ ಬಾರಿಸಿದರು. 57 ಎಸೆತಗಳಲ್ಲಿ ಶತಕ ಪೂರೈಸಿದ ಸುದರ್ಶನ್ಗೆ ಇದು ಮೂರನೇ ಐಪಿಎಲ್ ಶತಕವಾಗಿದೆ. ಅಂತಿಮವಾಗಿ ಸುದರ್ಶನ್ 58 ಎಸೆತಗಳಲ್ಲಿ 100 ರನ್ ಗಳಿಸಿ ಹೇಜಲ್ವುಡ್ಗೆ ಬಲಿಯಾದರು. ಈ ಶತಕದೊಂದಿಗೆ, ಸಾಯಿ ಸುದರ್ಶನ್ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು.
ಹ್ಯಾಟ್ರಿಕ್ ಶತಕ ಬಾರಿಸಿದ ಸುದರ್ಶನ್
ಸಾಯಿ ಸುದರ್ಶನ್ ಕಳೆದ ಮೂರು ಸೀಸನ್ಗಳಲ್ಲಿ ತಲಾ ಒಂದೊಂದು ಶತಕದಂತೆ ಮೂರು ಶತಕಗಳನ್ನು ಬಾರಿಸಿದ್ದಾರೆ. ಅಂದರೆ 2024 ರ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದ ಸುದರ್ಶನ್, ಆ ನಂತರ 2025 ರ ಐಪಿಎಲ್‌ನಲ್ಲಿ ತಮ್ಮ ಎರಡನೇ ಶತಕ ಬಾರಿಸಿದ್ದರು. ಇದೀಗ ಅವರು ಐಪಿಎಲ್ 2026 ರಲ್ಲಿ ಆರ್ಸಿಬಿ ವಿರುದ್ಧ ತಮ್ಮ ಮೂರನೇ ಶತಕವನ್ನು ಕಲೆಹಾಕಿದ್ದಾರೆ.
3ನೇ ಐಪಿಎಲ್ ಶತಕ
ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್, ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್ ಮೇಲೆ ದಾಳಿ ನಡೆಸಿ ಪವರ್ ಪ್ಲೇನಲ್ಲಿ ಭಾಗಶಃ ಎಸೆತಗಳನ್ನು ತಾವೇ ಎದುರಿಸಿ ಅರ್ಧಶತಕದ ಸಮೀಪಕ್ಕೆ ಬಂದರು. ಆದರೆ ಇತ್ತ ನಾಯಕ ಗಿಲ್ ಆ ವೇಳೆಗೆ ಎದುರಿಸಿದ್ದು ಕೇವಲ ನಾಲ್ಕೈದು ಎಸೆತಗಳನ್ನು ಮಾತ್ರ. 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸುದರ್ಶನ್, ನಾಯಕ ಗಿಲ್ ಜೊತೆಗೆ ಅರ್ಧಶತಕದ ಜೊತೆಯಾಟವನ್ನು ನಡೆಸಿದರು. ಸುದರ್ಶನ್ ಎರಡು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ನಂತರ ಸುದರ್ಶನ್ 59 ಎಸೆತಗಳಲ್ಲಿ ಗಿಲ್ ಜೊತೆ ಶತಕದ ಜೊತೆಯಾಟ ನಡೆಸಿದರು. ಸುದರ್ಶನ್ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.
RCB vs GT IPL 2026 Live Score: 3ನೇ ಶತಕ ಬಾರಿಸಿದ ಸುದರ್ಶನ್
ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್
ಸಾಯಿ ಸುದರ್ಶನ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸಹ ಮುರಿದರು. ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 47 ಇನ್ನಿಂಗ್ಸ್‌ಗಳಲ್ಲಿ 2000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಗೇಲ್ ದಾಖಲೆಯನ್ನು ಮುರಿದರು. ಸಾಯಿ ಸುದರ್ಶನ್ 1361 ಎಸೆತಗಳಲ್ಲಿ ಐಪಿಎಲ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಕಡಿಮೆ ಎಸೆತಗಳ ವಿಚಾರದಲ್ಲಿ ಅಭಿಷೇಕ್ ಶರ್ಮಾ ಅಗ್ರಸ್ಥಾನದಲ್ಲಿದ್ದು, 1193 ಎಸೆತಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಸೆಹ್ವಾಗ್ 1211 ಎಸೆತಗಳಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




