ಅಫ್ಘಾನ್ ತಂಡದ ಸೆಮಿಸ್ ಕನಸು ಜೀವಂತ; ಆದರೆ.. ಮುಂದಿನ 2 ಪಂದ್ಯಗಳು ನಿರ್ಣಾಯಕ..!
Afghanistan, ICC World Cup 2023: ಪ್ರಸ್ತುತ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಅಫ್ಘಾನ್ ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ. ಈ ಮುಂದಿನ ಎರಡು ಪಂದ್ಯಗಳಲ್ಲಿ ಅಫ್ಘಾನ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ
ಮೊಹಮ್ಮದ್ ನಬಿ ಅವರ ಬಲಿಷ್ಠ ಬೌಲಿಂಗ್ ದಾಳಿ ಹಾಗೂ ರಹಮತ್ ಷಾ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಅವರ ಅಮೋಘ ಅರ್ಧಶತಕದ ನೆರವಿನಿಂದ ನೆದರ್ಲೆಂಡ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸುವಲ್ಲಿ ಅಫ್ಘಾನಿಸ್ತಾನ ತಂಡ (Netherlands vs Afghanistan) ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತಂಡ ಎಂಟು ಅಂಕಗಳೊಂದಿಗೆ ಪ್ರಸ್ತುತ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ (ICC World Cup 2023 Points Table) ಐದನೇ ಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡ 179 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ ಕೇವಲ 31.3 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅಫ್ಘಾನಿಸ್ತಾನ ತಂಡ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ತನ್ನ ಸೆಮಿಫೈನಲ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ.
ಅಫ್ಘಾನ್ಗೆ 2 ಪಂದ್ಯಗಳು ಬಾಕಿ
ಪ್ರಸ್ತುತ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಅಫ್ಘಾನ್ ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ. ಈ ಮುಂದಿನ ಎರಡು ಪಂದ್ಯಗಳಲ್ಲಿ ಅಫ್ಘಾನ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳನ್ನು ಎರಡು ಬಲಿಷ್ಠ ತಂಡಗಳೆದುರು ಅಫ್ಘಾನ್ ಆಡಬೇಕಿರುವುದರಿಂದ ಅದರ ಸೆಮಿಫೈನಲ್ ಹಾದಿ ಅಷ್ಟು ಸುಲಭವಾಗಿಲ್ಲ. ಆದರೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನೆರೆಯ ಪಾಕಿಸ್ತಾನವನ್ನು ಸೋಲಿಸಿರುವ ಹಶ್ಮತುಲ್ಲಾ ಶಾಹಿದಿ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಹೀಗಾಗಿ ಅಫ್ಘಾನಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಸೆಮಿಸ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ಆದಾಗ್ಯೂ, ಅಫ್ಘಾನ್ ತಂಡ ಒಂದು ಪಂದ್ಯದಲ್ಲಿ ಸೋತು, ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಇತರ ಪಂದ್ಯಗಳ ಫಲಿತಾಂಶಗಳಿಗಾಗಿ ಕಾಯಬೇಕಾಗುತ್ತದೆ.
NED vs AFG, Highlights: ನೆದರ್ಲೆಂಡ್ಸ್ ವಿರುದ್ಧ ಸುಲಭವಾಗಿ ಗೆದ್ದ ಅಫ್ಘಾನಿಸ್ತಾನ
ಸೆಮಿಫೈನಲ್ ತಲುಪುತ್ತಾ ಅಫ್ಘಾನ್
ಪ್ರಸ್ತುತ ಅಫ್ಘಾನಿಸ್ತಾನವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳಷ್ಟೇ ಸಮಾನವಾದ ಅಂಕಗಳನ್ನು ಹೊಂದಿದೆ. ಆದರೆ ಅಫ್ಘಾನ್ ತಂಡ ಆಸ್ಟ್ರೇಲಿಯಾಕ್ಕಿಂತ ಒಂದು ಪಂದ್ಯವನ್ನು ಹೆಚ್ಚು ಆಡಿದ್ದರೆ, ನ್ಯೂಜಿಲೆಂಡ್‌ನಂತೆಯೇ ಅದೇ ಸಂಖ್ಯೆಯ ಪಂದ್ಯಗಳನ್ನು ಆಡಿದೆ. ವಾಸ್ತವಿಕವಾಗಿ ಹೇಳುವುದಾದರೆ, ಅಫ್ಘಾನ್ ತಂಡ ತಮ್ಮ ಉಳಿದಿರುವ ಎರಡೂ ಪಂದ್ಯಗಳನ್ನು ಉತ್ತಮ ನೆಟ್ ರನ್ರೇಟ್ನಿಂದ ಗೆದ್ದರೆ, ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಲಿದೆ. ಹಾಗೆಯೇ ಸೆಮಿಫೈನಲ್ಗೂ ಎಂಟ್ರಿಕೊಡಲಿದೆ. ಆದಾಗ್ಯೂ, ಅಫ್ಘಾನಿಸ್ತಾನದ ನೆಟ್ ರನ್ರೇಟ್ ಪ್ರಸ್ತುತ -0.330 ಆಗಿದ್ದರೆ, ನ್ಯೂಜಿಲೆಂಡ್ ತಂಡದ ನೆಟ್ ರನ್ರೇಟ್ +0.484 ಆಗಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಬೇಕೆಂದರೆ ಅಫ್ಘಾನಿಸ್ತಾನ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆಲ್ಲಬೇಕಿದೆ.
ಶನಿವಾರದ ಪಂದ್ಯಗಳು ನಿರ್ಣಾಯಕ
ಅದಾಗ್ಯೂ ನಾಳೆ ಶನಿವಾರ ನಡೆಯಲ್ಲಿರುವ ಎರಡು ಪಂದ್ಯಗಳು ಅಫ್ಘಾನಿಸ್ತಾನದ ಸೆಮಿಸ್ ಅವಕಾಶಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಏಕೆಂದರೆ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನವನ್ನು ಮತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಪಾಕಿಸ್ತಾನವು, ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಆಗ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಪಾಯಿಂಟ್‌ಗಳ ವಿಚಾರದಲ್ಲಿ ಸಮಬಲ ಸಾಧಿಸಲಿವೆ. ಅಲ್ಲದೆ ನೆಟ್ ರನ್ ರೇಟ್ ಮತ್ತು ಉಳಿದ ತಂಡಗಳ ಫಲಿತಾಂಶಗಳ ಆಧಾರದ ಮೇಲೆ ಉಳಿದ ಮೂರು ತಂಡಗಳೊಂದಿಗೆ ನಾಲ್ಕನೇ ಸ್ಥಾನಕ್ಕಾಗಿ ಮುಕ್ತ ಹೋರಾಟ ನಡೆಸಲಿದೆ.
ಆಸೀಸ್ ಸೋಲಲೇಬೇಕು
ಮತ್ತೊಂದೆಡೆ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ ಒಂದು ವೇಳೆ ಆಸೀಸ್ ಪಡೆ ಸೋತರೆ, ಸೆಮೀಸ್ ಫೈಟ್ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ. ಏಕೆಂದರೆ ಇಂಗ್ಲೆಂಡ್ ವಿರುದ್ಧ ಕಾಂಗರೂಗಳು ಸೋತರೆ, ಪಾಯಿಂಟ್ ಪಟ್ಟಿಯಲ್ಲಿ ಅಫ್ಘಾನ್ ಹಾಗೂ ಆಸೀಸ್ ಸಮನಾದ ಅಂಕಗಳನ್ನು ಹೊಂದಿರಲಿವೆ. ಆ ಬಳಿಕ ಈ ಉಭಯ ತಂಡಗಳ ನಡುವೆಯೇ ನವೆಂಬರ್ 7 ರಂದು ಪಂದ್ಯ ನಡೆಯುವುದರಿಂದ ಈ ಪಂದ್ಯದಲ್ಲಿ ಸೋತ ತಂಡಕ್ಕೆ ಸೆಮಿಸ್ ಹಾದಿ ಮುಚ್ಚಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Fri, 3 November 23