ಪಾಕ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ ಅರ್ಜುನ್ ರಜಪೂತ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲಿ ಒತ್ತಡದ ಹಾದಿ ಸಾಮಾನ್ಯ. ಯು-19 ಏಷ್ಯಾ ಕಪ್‌ನಲ್ಲೂ ಅಂತಹದ್ದೇ ಹೈ-ಪ್ರೆಶರ್ ಸನ್ನಿವೇಶ ಸೃಷ್ಟಿಯಾಗಿತ್ತು. ಪಾಕ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ರಜಪೂತ್ ಸ್ಫೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

ಪಾಕ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ ಅರ್ಜುನ್ ರಜಪೂತ್!
Arjun Rajput
Image Credit source: ACC

Updated on: Nov 08, 2026 | 2:16 PM

ಒಮಾನ್​ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಟೂರ್ನಿಯ 8ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅರ್ಜುನ್ ರಜಪೂತ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಲಕ್ಷ್ಯ ರೈಚಂದಾನಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಭಾರತದ ಇನಿಂಗ್ಸ್ ಆರಂಭಿಸಿದ ಲಕ್ಷ್ಯ ರೈಚಂದಾನಿ (0) ಖಾತೆ ತೆರೆಯುವ ಮುನ್ನವೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ 22 ರನ್​ ಗಳಿಸಿ ವಿಕೆಟ್ ಒಪ್ಪಿಸಿದರೆ, ಭರವಸೆಯ ಬ್ಯಾಟರ್ ವಿ.ಕೆ ವಿನೀತ್ ಕೇವಲ 8 ರನ್​ಗೆ ಹೊರನಡೆದರು. ಇದರ ಬೆನ್ನಲ್ಲೇ ಯಶ್​ಬರ್ಧನ್ ಚೌಹಾಣ್ (1) ಕೂಡ ಕ್ಲೀನ್ ಬೌಲ್ಡ್ ಆಗುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದಂತಾಗಿತ್ತು.

Loading...

ತಂಡವು ಭಾರಿ ಆಘಾತ ಎದುರಿಸುತ್ತಿದ್ದ ಇಂತಹ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ಅರ್ಜುನ್ ರಜಪೂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಆಟಕ್ಕೆ ಒತ್ತು ನೀಡಿದ ಅರ್ಜುನ್, ಪಾಕಿಸ್ತಾನದ ಬೌಲರ್​ಗಳನ್ನು ಮನಸೋಇಚ್ಛೆ ದಂಡಿಸಿದರು. ಎದುರಾಳಿಗಳ ಮಾರಕ ದಾಳಿಗೆ ದಿಟ್ಟ ಉತ್ತರ ನೀಡುತ್ತಾ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಅವರು, ಕೇವಲ 80 ಎಸೆತಗಳಲ್ಲಿ ತಮ್ಮ ಸ್ಮರಣೀಯ ಶತಕವನ್ನು ಪೂರ್ಣಗೊಳಿಸಿದರು.

ಶತಕದ ಸಂಭ್ರಮದ ಬಳಿಕವೂ ಕೇವಲ 5 ಎಸೆತಗಳನ್ನು ಎದುರಿಸಿದ ಅರ್ಜುನ್ ರಜಪೂತ್, ಅಂತಿಮವಾಗಿ 85 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 11 ಆಕರ್ಷಕ ಫೋರ್​ಗಳೊಂದಿಗೆ 107 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಭಾರತ ತಂಡವು ಗೌರವಯುತ ಮೊತ್ತ ಪೇರಿಸಲು ಅರ್ಜುನ್ ಅವರ ಈ ಏಕಾಂಗಿ ಹೋರಾಟದ ಇನಿಂಗ್ಸ್ ಪ್ರಮುಖ ಕಾರಣವಾಯಿತು. ಅರ್ಜುನ್ ರಜಪೂತ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಲೇ ಟೀಮ್ ಇಂಡಿಯಾ 46.3 ಓವರ್​ಗಳಲ್ಲಿ 208 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡಕ್ಕೆ 50 ಓವರ್​ಗಳಲ್ಲಿ 209 ರನ್​ಗಳ ಗುರಿ ನೀಡಿದೆ.

ಯಾರು ಈ ಅರ್ಜುನ್ ರಜಪೂತ್?

ಇತ್ತೀಚೆಗೆ ಮುಕ್ತಾಯಗೊಂಡ ದೇಶಿ ಕ್ರಿಕೆಟ್‌ನ ವಿನೂ ಮಂಕಡ್ ಟ್ರೋಫಿಯಲ್ಲಿ ಪಂಜಾಬ್ U19 ತಂಡವನ್ನು ಮುನ್ನಡೆಸಿದ್ದ ಅರ್ಜುನ್, ಬರೋಬ್ಬರಿ 13 ವರ್ಷಗಳ ಬಳಿಕ ಪಂಜಾಬ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದರು. ಆ ಟೂರ್ನಿಯಲ್ಲಿ 8 ಪಂದ್ಯಗಳಿಂದ 695 ರನ್ ಹಾಗೂ 11 ವಿಕೆಟ್ ಪಡೆದು ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೇ ಭರ್ಜರಿ ಫಾರ್ಮ್ ಅನ್ನು ಅವರು ಏಷ್ಯಾ ಕಪ್‌ನಲ್ಲೂ ಮುಂದುವರಿಸಿದ್ದಾರೆ.

ಭಾರತ U19 ಪ್ಲೇಯಿಂಗ್ 11: ಲಕ್ಷ್ಯ ರೈಚಂದಾನಿ (ನಾಯಕ ), ಆರ್ಯವೀರ್ ಸೆಹ್ವಾಗ್ , ವಿಕೆ ವಿನೀತ್ , ಯಶ್​ಬರ್ಧನ್ ಚೌಹಾಣ್ , ಅರ್ಜುನ್ ರಜಪೂತ್ , ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್) , ಮನಲ್ ಚೌಹಾಣ್ , ಯಶ್ವೀರ್ ಗೌಡ್ ,
ಮೋಹಿತ್ ಉಲ್ವಾ , ಕಾವ್ಯ ಪಟೇಲ್ , ಇಶಾನ್ ಸೂದ್.

ಇದನ್ನೂ ಓದಿ: ಏಷ್ಯಾಕಪ್ ಟೂರ್ನಿಯಿಂದ ರಜತ್ ಪಾಟಿದಾರ್ ಔಟ್!

ಪಾಕಿಸ್ತಾನ್ U19 ಪ್ಲೇಯಿಂಗ್ 11: ಫರ್ಹಾನ್ ಯೂಸುಫ್ (ನಾಯಕ) , ಜಹಾಂಗೀರ್ ಬಿಲಾಲ್ , ಅಬ್ದುಲ್ ಖಾದಿರ್ ,
ಉಸ್ಮಾನ್ ಖಾನ್ , ಅಹ್ಮದ್ ಹುಸೇನ್ , ಹಸ್ನೈನ್ ಅಬ್ಬಾಸ್ ದಾರ್ , ಹಮ್ಜಾ ಜಹೂರ್ (ವಿಕೆಟ್ ಕೀಪರ್) , ಮೊಹಮ್ಮದ್ ಸಯ್ಯಮ್ , ನಿಖಾಬ್ ಶಫೀಕ್ , ರಿಜ್ವಾನುಲ್ಲಾ , ಅಲಿ ರಝಾ.

 

Published On - 2:12 pm, Sun, 8 November 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us