ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುವ ಏಷ್ಯಾ ಕಪ್ 2022 (ASIA CUP 2022) ಗೆ ಡೇಟ್ ಫಿಕ್ಸ್ ಆಗಿದೆ. ಆಗಸ್ಟ್ 24 ರಿಂದ ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 7 ರಂದು ನಡೆಯಲಿದೆ ಎಂದು ವರದಿಯಾಗಿದೆ. ಈ ಹಿಂದೆ ಆಗಸ್ಟ್ 27 ರಿಂದ ಏಷ್ಯಾ ಕಪ್ಗೆ ಚಾಲನೆ ಸಿಗಲಿದೆ ಎನ್ನಲಾಗಿತ್ತು. ಆದರೀಗ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಟೂರ್ನಿಯನ್ನು ಶ್ರೀಲಂಕಾದಲ್ಲೇ ಆಯೋಜಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಶೀಘ್ರದಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ನಡೆಸುವ ಸಾಧ್ಯತೆಯಿದೆ.
ಈ ಬಾರಿ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಇದೀಗ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಹೀಗಾಗಿ ಟೂರ್ನಿಯನ್ನು ಯುಎಇ ಅಥವಾ ಬಾಂಗ್ಲಾದೇಶಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಕೂಡ ಇದೆ. ಇದಾಗ್ಯೂ ಆಗಸ್ಟ್ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಸಾಧ್ಯತೆಯಿದ್ದರೆ ಶ್ರೀಲಂಕಾದಲ್ಲೇ ಏಷ್ಯಾ ಕಪ್ ನಡೆಯಲಿದೆ.
ವಿಶೇಷ ಎಂದರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಆದರೆ ಅದಕ್ಕೂ ಮುನ್ನ ಉಭಯ ತಂಡಗಳು ಏಷ್ಯಾ ಕಪ್ನಲ್ಲೂ ಸೆಣಸಾಡಲಿದೆ. ಈ ಬಾರಿ ಏಷ್ಯಾ ಕಪ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ 5 ತಂಡಗಳು ಅರ್ಹತೆ ಪಡೆದುಕೊಂಡಿದೆ. ಇನ್ನು ಒಂದು ತಂಡವು ಅಂತಿಮವಾಗಬೇಕಿದೆ.
ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದಿವೆ. ಆರನೇ ತಂಡವನ್ನು ಅರ್ಹತಾ ಸುತ್ತಿನಲ್ಲಿ ನಿರ್ಧರಿಸಲಾಗುತ್ತದೆ. ಹಾಂಗ್ ಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿವೆ. ಹೀಗಾಗಿ ಈ ತಂಡಗಳಲ್ಲಿ ಒಂದು ತಂಡವು ಈ ಬಾರಿ ಏಷ್ಯಾ ಕಪ್ನಲ್ಲಿ ಕಾಣಿಸಿಕೊಳ್ಳಲಿದೆ.
ಅಂದಹಾಗೆ ಈ ಬಾರಿ ಆಯೋಜನೆಗೊಳ್ಳುತ್ತಿರುವುದು 15ನೇ ಸೀಸನ್ ಏಷ್ಯಾ ಕಪ್. 1984 ರಲ್ಲಿ ಯುಎಇನಲ್ಲಿ ಶುರುವಾದ ಏಷ್ಯಾ ಕಪ್ಗೆ ಈ ಬಾರಿ ಲಂಕಾ ಕ್ರಿಕೆಟ್ ಮಂಡಳಿ ಆತಿಥ್ಯವಹಿಸುವ ಸಾಧ್ಯತೆಯಿದೆ. ಇನ್ನು ಕಳೆದ ವರ್ಷ ಕೊರೋನಾ ಕಾರಣದಿಂದ ಟೂರ್ನಿಯನ್ನು ನಡೆಸಿರಲಿಲ್ಲ. ಇದೀಗ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೂ ಮುನ್ನ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.
ಏಷ್ಯಾ ಕಪ್ ದಾಖಲೆ:
ಇದುವರೆಗೆ ಏಷ್ಯಾಕಪ್ ಅನ್ನು ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿತ್ತು. ಇದೀಗ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಇನ್ನು ಒಟ್ಟಾರೆ ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಲ್ಲದೇ ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.