IPL 2022: ಕೊಹ್ಲಿ, ರೋಹಿತ್ಗಿಲ್ಲ ಸ್ಥಾನ: ಇದು ಸಚಿನ್ ತೆಂಡೂಲ್ಕರ್ ಐಪಿಎಲ್ ಪ್ಲೇಯಿಂಗ್ 11
Sachin Tendulkar's IPL 2022 XI: ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ಸಚಿನ್ ಆಯ್ಕೆ ಮಾಡಿದ್ದಾರೆ. ಐಪಿಎಲ್ 15ನೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ.
IPL 2022: ಐಪಿಎಲ್ ಸೀಸನ್ 15 ಮುಕ್ತಾಯದ ಬೆನ್ನಲ್ಲೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar’s IPL 2022 XI) ಈ ಬಾರಿಯ ಐಪಿಎಲ್ನ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಅನ್ನು ಆಯ್ಕೆ ಮಾಡಿದ್ದಾರೆ. ವಿಶೇಷ ಎಂದರೆ ಈ ಪ್ಲೇಯಿಂಗ್ ಇಲೆವೆನ್ನಲ್ಲಿ ಖ್ಯಾತ ಆಟಗಾರರು ಸ್ಥಾನ ಪಡೆದಿಲ್ಲ. ಅದರಲ್ಲೂ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಸೇರಿದಂತೆ ಪ್ರಮುಖ ಆಟಗಾರರನ್ನು ಸಚಿನ್ ತೆಂಡೂಲ್ಕರ್ ಕೈ ಬಿಟ್ಟಿದ್ದಾರೆ. ಇನ್ನು ಈ ತಂಡದ ನಾಯಕನಾಗಿ ಆಯ್ಕೆಯಾಗಿದ್ದು ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್ ಟೀಮ್ನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಎಂಬುದು ವಿಶೇಷ.
ಹಾಗೆಯೇ ಸಚಿನ್ ತೆಂಡೂಲ್ಕರ್ ಅವರ ಬೆಸ್ಟ್ ಪ್ಲೇಯಿಂಗ್ ಇಲೆವೆನ್ನ ಆರಂಭಿಕರಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. ಬಲ ಮತ್ತು ಎಡಗೈ ಬ್ಯಾಟ್ಸ್‌ಮನ್‌ಗಳ ಸಂಯೋಜನೆಯನ್ನು ಉಳಿಸಿಕೊಳ್ಳಲು ಸಚಿನ್ ಬಟ್ಲರ್ ಹಾಗೂ ಧವನ್ ಅವರನ್ನು ಆರಿಸಿಕೊಂಡಿದ್ದಾರೆ. ಇನ್ನು ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ಪರ ಈ ಬಾರಿ 863 ರನ್ ಗಳಿಸಿದ್ದರು. ಅಲ್ಲದೆ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಹಾಗೆಯೇ ಪಂಜಾಬ್ ಕಿಂಗ್ಸ್ ಪರ ಆಡಿದ ಶಿಖರ್ ಧವನ್ 14 ಪಂದ್ಯಗಳಲ್ಲಿ 460 ರನ್ ಗಳಿಸಿದ್ದರು.
ಇನ್ನು ತಂಡದಲ್ಲಿ ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರನ್ನು ಸಚಿನ್ ಆಯ್ಕೆ ಮಾಡಿದ್ದಾರೆ. ಐಪಿಎಲ್ 15ನೇ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಬಾರಿ ಕೆಎಲ್ಆರ್ 15 ಪಂದ್ಯಗಳಲ್ಲಿ 2 ಶತಕಗಳ ನೆರವಿನಿಂದ 616 ರನ್ ಗಳಿಸಿದ್ದರು.
ಈ ಸೀಸನ್‌ನಲ್ಲಿ ಗುಜರಾತ್ ಪರ ನಾಲ್ಕನೇ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಅವರನ್ನೇ ಸಚಿನ್ ನಾಲ್ಕನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದಾರೆ.
ಬೌಲರ್ಗಳಾಗಿ ತಂಡದಲ್ಲಿ ರಶೀದ್ ಖಾನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಯುಜ್ವೇಂದ್ರ ಚಹಾಲ್ ಅವರಿಗೆ ಸ್ಥಾನ ನೀಡಲಾಗಿದೆ. ಇದಾಗ್ಯೂ 26 ವಿಕೆಟ್ ಪಡೆದ ಆರ್ಸಿಬಿ ಆಟಗಾರ ವನಿಂದು ಹಸರಂಗ ಅವರನ್ನು ಸಚಿನ್ ತೆಂಡೂಲ್ಕರ್ ಕೈಬಿಟ್ಟಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ IPL 2022 ಪ್ಲೇಯಿಂಗ್ ಇಲೆವೆನ್: ಜೋಸ್ ಬಟ್ಲರ್, ಶಿಖರ್ ಧವನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ದಿನೇಶ್ ಕಾರ್ತಿಕ್, ರಶೀದ್ ಖಾನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.