IPL 2022: ಕೊಹ್ಲಿ ಕೈ ಹಿಡಿಯದ ಅದೃಷ್ಟ: ಐಪಿಎಲ್ ಚಾಂಪಿಯನ್ ತಂಡದಲ್ಲಿ 17 ಆಸ್ಟ್ರೇಲಿಯನ್ನರು..!
2008ರಿಂದ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನ್ ಮತ್ತು ಶೇನ್ ವಾಟ್ಸನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮುಕ್ತಾಯದ ಬೆನ್ನಲ್ಲೇ ಹೊಸ ಚರ್ಚೆ ಶುರುವಾಗಿದೆ. ಅದೇನೆಂದರೆ ವಿರಾಟ್ ಕೊಹ್ಲಿ ಕಪ್ ಗೆಲ್ಲೋದು ಯಾವಾಗ?.. ಇದಕ್ಕೆ ಕಾರಣ ಕೂಡ ಇದೆ. ಏಕೆಂದರೆ ಐಪಿಎಲ್ ಆಡಿರುವ ಭಾರತದ ಪ್ರಮುಖ ಆಟಗಾರರು ಚಾಂಪಿಯನ್ ತಂಡಗಳ ಭಾಗವಾಗಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿಗೆ 15 ವರ್ಷಗಳು ಕಳೆದರೂ ಅದೃಷ್ಟ ಮಾತ್ರ ಕೂಡಿಬಂದಿಲ್ಲ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಇನ್ನು ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ವಿಶೇಷ ಎಂದರೆ 8 ವರ್ಷಗಳ ಬಳಿಕ ಐಪಿಎಲ್ಗೆ ಮರಳಿದ ಆಸ್ಟ್ರೇಲಿಯಾ ಆಟಗಾರ ಮ್ಯಾಥ್ಯೂ ವೇಡ್ ಇದೀಗ ಚಾಂಪಿಯನ್ ತಂಡದ ಭಾಗವಾಗಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ವೇಡ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಪ್ರಶಸ್ತಿ ಗೆದ್ದ ತಂಡ ಭಾಗವಾಗಿದ್ದಾರೆ. ಇದರೊಂದಿಗೆ ಐಪಿಎಲ್ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ 17ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಪಾಲ್ಗೊಂಡಿದ್ದ ವೇಗದ ಬೌಲರ್ ಜೋಸ್ ಹ್ಯಾಝಲ್‌ವುಡ್ ಕೂಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅದೇ 2020 ರಲ್ಲಿ, ಮುಂಬೈ ಇಂಡಿಯನ್ಸ್‌ನಲ್ಲಿ ಭಾಗಿಯಾಗಿದ್ದ ವೇಗದ ಬೌಲರ್ ನಾಥನ್ ಕೌಲ್ಟರ್-ನೈಲ್ ಚಾಂಪಿಯನ್ ತಂಡದ ಭಾಗವಾಗಿದ್ದರು.
ಹಾಗೆಯೇ 2008ರಿಂದ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2008ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನ್ ಮತ್ತು ಶೇನ್ ವಾಟ್ಸನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 2009 ರಲ್ಲಿಆ್ಯಡಮ್ ಗಿಲ್‌ಕ್ರಿಸ್ಟ್, ಆಂಡ್ರ್ಯೂ ಸೈಮಂಡ್ಸ್, ರಿಯಾನ್ ಹ್ಯಾರಿಸ್ ಮತ್ತು 2010 ರಲ್ಲಿ ಮ್ಯಾಥ್ಯೂ ಹೇಡನ್ ಮತ್ತು ಡೌಗ್ ಬೋಲಿಂಜರ್ ಅವರು ಚಾಂಪಿಯನ್ ತಂಡದ ಭಾಗವಾಗಿದ್ದರು. 2011 ರಲ್ಲಿ ಮೈಕ್ ಹಸ್ಸಿ ಮತ್ತು ಬೋಲಿಂಜರ್ ಅವರು CSK ಗಾಗಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
2012 ರಲ್ಲಿ ಕೆಕೆಆರ್ ತಂಡದ ವೇಗದ ಬೌಲರ್ ಬ್ರೆಟ್ ಲೀ ಮತ್ತು 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಮಿಚೆಲ್ ಜಾನ್ಸನ್, ಗ್ಲೆನ್ ಮ್ಯಾಕ್ಸ್ವೆಲ್ ಚಾಂಪಿಯನ್ ತಂಡದ ಭಾಗವಾಗಿದ್ದರು. 2016 ರಲ್ಲಿ, ಡೇವಿಡ್ ವಾರ್ನರ್ ತಮ್ಮ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ಅನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಈ ವೇಳೆ ತಂಡದಲ್ಲಿ ಮೊಯಿಸೆಸ್ ಹೆನ್ರಿಕ್ಸ್ ಮತ್ತು ಬೆನ್ ಕಟಿಂಗ್ ಕೂಡ ಇದ್ದರು.
ಮಿಚೆಲ್ ಜಾನ್ಸನ್ 2017 ರಲ್ಲಿ ಎರಡನೇ ಬಾರಿಗೆ ಮತ್ತು ಶೇನ್ ವ್ಯಾಟ್ಸನ್ 2018 ರಲ್ಲಿ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಐಪಿಎಲ್ ಆಡಿದ ಆಸ್ಟ್ರೇಲಿಯಾದ 17 ಪ್ರಮುಖ ಆಟಗಾರರು ಚಾಂಪಿಯನ್ ತಂಡಗಳ ಭಾಗವಾಗಿರುವುದು ವಿಶೇಷ. ಇನ್ನು ಭಾರತದ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಯುವರಾಜ್ ಸಿಂಗ್ (ಮುಂಬೈ ಇಂಡಿಯನ್ಸ್), ಗೌತಮ್ ಗಂಭೀರ್ (ಕೆಕೆಆರ್), ಹರ್ಭಜನ್ ಸಿಂಗ್, ಧೋನಿ, ಸೂರ್ಯಕುಮಾರ್ ಯಾದವ್ ಸೇರಿದಂತೆ ಪ್ರಮುಖ ಆಟಗಾರರು ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿದ್ದಾರೆ. ಇದಾಗ್ಯೂ ಕಳೆದ 15 ವರ್ಷಗಳಿಂದ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಮಾತ್ರ ಐಪಿಎಲ್ ಟ್ರೋಫಿ ಎತ್ತಿಹಿಡಿಯುವ ಅದೃಷ್ಟ ದೊರೆತಿಲ್ಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.