Team India: ಮುಂದಿನ 6 ತಿಂಗಳು ಟೀಮ್ ಇಂಡಿಯಾ ಫುಲ್ ಬಿಝಿ: ಹೀಗಿದೆ ವೇಳಾಪಟ್ಟಿ
Indian Cricket Team Schedule: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಸುಮಾರು 20 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿರುವುದು ವಿಶೇಷ.
ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಮುಕ್ತಾಯದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡ (Team India) ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗಾಗಿ ಸಜ್ಜಾಗುತ್ತಿದೆ. ಅದರಂತೆ ಮುಂದಿನ 6 ತಿಂಗಳುಗಳ ಕಾಲ ಟೀಮ್ ಇಂಡಿಯಾ ತುಂಬಾ ಬ್ಯುಸಿಯಾಗಿದೆ. ಜೂನ್ 5 ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಿಂದ ಆರಂಭವಾಗುವ ಟೀಮ್ ಇಂಡಿಯಾದ ಮುಂದಿನ ಆರು ತಿಂಗಳ ವೇಳಾಪಟ್ಟಿಯಲ್ಲಿ ಏಷ್ಯಾ ಕಪ್ 2022 (Asia Cup 2022), ಟಿ20 ವಿಶ್ವಕಪ್ (T20 World Cup 2022) ಮತ್ತು ಇಂಗ್ಲೆಂಡ್ ಸರಣಿ ಸೇರಿದಂತೆ ಪ್ರಮುಖ ಸರಣಿಗಳು ಸೇರಿವೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಸುಮಾರು 20 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿರುವುದು ವಿಶೇಷ. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ 5 ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ನಿಯಮಿತ ನಾಯಕ ರೋಹಿತ್ ಶರ್ಮಾ ಸೇರಿದಂತೆ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಈ ಸರಣಿಯ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಅಭ್ಯಾಸ ಪಂದ್ಯಗಳು, 3 ODI, 3 T20 ಮತ್ತು ಕಳೆದ ವರ್ಷ ಮುಂದೂಡಲ್ಪಟ್ಟ ಸರಣಿಯ ಐದನೇ ಟೆಸ್ಟ್ ಪಂದ್ಯವನ್ನು ಆಡಲಿದೆ.
ಇದಾದ ಬಳಿಕ ಭಾರತ ತಂಡವು ಐರ್ಲೆಂಡ್ ವಿರುದ್ದ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2ನೇ ತಂಡ ಆಡಲಿದ್ದು, ವಿವಿಎಸ್ ಲಕ್ಷ್ಮಣ್ ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಕೋಚ್ ಆಗಿ ಜೊತೆಯಾಗಲಿದ್ದಾರೆ. ಏಕೆಂದರೆ ಇದೇ ವೇಳೆ ರಾಹುಲ್ ದ್ರಾವಿಡ್ ಇಂಗ್ಲೆಂಡ್‌ನಲ್ಲಿರುವ ಹಿರಿಯ ತಂಡದೊಂದಿಗೆ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಐರ್ಲೆಂಡ್ ಪ್ರವಾಸದ ನಂತರ, ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಯನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಜುಲೈ ಅಂತ್ಯದಲ್ಲಿ ಈ ಸರಣಿಯನ್ನು ಆರಂಭಿಸುವ ಸಾಧ್ಯತೆ ಇದೆ. ಇದರಲ್ಲಿ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಾಗುತ್ತದೆ.
ವೆಸ್ಟ್ ಇಂಡೀಸ್ ಸರಣಿಯ ಬಳಿಕ ಶ್ರೀಲಂಕಾ ವಿರುದ್ಧ 2 ಟಿ20 ಪಂದ್ಯಗಳನ್ನು ಆಡಲಿದೆ. ಇದರ ನಂತರ ಏಷ್ಯಾಕಪ್‌ನಲ್ಲಿ ಭಾರತ ತಂಡ ಕನಿಷ್ಠ 5 ಟಿ20 ಪಂದ್ಯಗಳನ್ನು ಆಡಲಿದೆ. ಏಷ್ಯಾಕಪ್‌ನಿಂದ ಹಿಂತಿರುಗಿದ ನಂತರ, ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ. ಅಂದರೆ ಮುಂದಿನ 6 ತಿಂಗಳುಗಳ ಕಾಲ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಸರಣಿ ಹಾಗೂ ಪ್ರಮುಖ ಟೂರ್ನಿಗಳನ್ನು ಆಡುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಒದಗಿಸಲಿದೆ.
ಟೀಮ್ ಇಂಡಿಯಾದ ಮುಂಬರುವ ಸರಣಿ ವೇಳಾಪಟ್ಟಿ:
- ಭಾರತ vs ದಕ್ಷಿಣ ಆಫ್ರಿಕಾ – ಜೂನ್ (5 ಟಿ20 ಪಂದ್ಯಗಳು)
- ಐರ್ಲೆಂಡ್ vs ಭಾರತ – ಜೂನ್ (2 ಟಿ20 ಪಂದ್ಯಗಳು )
- ಭಾರತ vs ಇಂಗ್ಲೆಂಡ್– ಜೂನ್/ಜುಲೈ (1 ಟೆಸ್ಟ್, 3 ODI ಮತ್ತು 3 T20s)
- ವೆಸ್ಟ್ ಇಂಡೀಸ್ vs ಭಾರತ– ಜುಲೈ/ಆಗಸ್ಟ್ (3 ODI, 5 T20)
- ಭಾರತ vs ಶ್ರೀಲಂಕಾ – ಆಗಸ್ಟ್ (2 ಟಿ20 ಪಂದ್ಯಗಳು)
- ಏಷ್ಯಾ ಕಪ್ 2022 – ಆಗಸ್ಟ್/ಸೆಪ್ಟೆಂಬರ್ (ಟಿ20 ಟೂರ್ನಿ)
- ಭಾರತ vs ಆಸ್ಟ್ರೇಲಿಯಾ – ಸೆಪ್ಟೆಂಬರ್ (3 ಟಿ20 ಪಂದ್ಯಗಳು)
- T20 ವಿಶ್ವಕಪ್ 2022 – ಅಕ್ಟೋಬರ್/ನವೆಂಬರ್
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.