Asia Cup 2025: ಭಾರತ- ಪಾಕ್ ಪಂದ್ಯಕ್ಕೂ ಫ್ಯಾನ್ಸ್ ಬರ; ಅರ್ಧದಷ್ಟೂ ಟಿಕೆಟ್ ಮಾರಾಟವಾಗಿಲ್ಲ
IND vs PAK Asia Cup 2025: 2025ರ ಏಷ್ಯಾಕಪ್‌ನಲ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಳು ಅರ್ಧಕ್ಕಿಂತ ಕಡಿಮೆ ಮಾರಾಟವಾಗಿವೆ. ಕೊಹ್ಲಿ ಮತ್ತು ರೋಹಿತ್ ಅವರ ಉಪಸ್ಥಿತಿಯಿಂದ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

2025 ರ ಏಷ್ಯಾಕಪ್‌ನಲ್ಲಿ (Asia Cup 2025) ಇಲ್ಲಿಯವರೆಗೆ 3 ಪಂದ್ಯಗಳು ನಡೆದಿವೆ. ಆದರೆ ಈ ಮೂರು ಪಂದ್ಯಗಳಲ್ಲೂ ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ಬೇರೆ ತಂಡಗಳ ಜೊತೆಗೆ ಟೀಂ ಇಂಡಿಯಾ ಪಂದ್ಯಕ್ಕೂ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿರಲಿಲ್ಲ. ಇದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಆದಾಗ್ಯೂ ಸೆಪ್ಟೆಂಬರ್ 14 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ಅಭಿಮಾನಿಗಳ ಕೊರತೆ ನೀಗಲಿದೆ ಎಂದು ಆಯೋಜಕರು ಭಾವಿಸಿದ್ದರು. ಆದರೆ ಪಂದ್ಯ ನಡೆಯಲು ಇನ್ನೇರಡು ದಿನಗಳು ಬಾಕಿ ಉಳಿದಿದ್ದರೂ ಅಭಿಮಾನಿಗಳು ಈ ಪಂದ್ಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅಂದರೆ ಈ ಪಂದ್ಯದ ಅರ್ಧದಷ್ಟು ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ.
ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಇಡೀ ಕ್ರೀಡಾಂಗಣವೇ ಅಭಿಮಾನಿಗಳಿಂದ ತುಂಬಿ ತುಳುಕುವುದು ಸರ್ವೆ ಸಾಮಾನ್ಯ ಆದರೆ ಉಭಯ ತಂಡಗಳು ಸೆಣಸಲಿರುವ ಏಷ್ಯಾಕಪ್ ಪಂದ್ಯದ ಮೇಲೆ ಅಭಿಮಾನಿಗಳು ನಿರುತ್ಸಾಹ ತೋರಿದ್ದಾರೆ ಎಂದು ವರದಿಯಾಗುತ್ತಿದೆ. ಇದೀಗ ಅಭಿಮಾನಿಗಳ ನಿರುತ್ಸಾಹಕ್ಕೆ ಕಾರಣ ತಿಳಿಸಿರುವ ಭಾರತದ ಮಾಜಿ ಕ್ರಿಕೆಟಿಗರೊಬ್ಬರು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈ ಪಂದ್ಯಾವಳಿಯಲ್ಲಿ ಆಡದ ಕಾರಣ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಆಕಾಶ್ ಚೋಪ್ರಾ ಹೇಳಿದ್ದೇನು?
ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ನಿರೀಕ್ಷಿಸಿದಷ್ಟು ಬೇಗ ಮಾರಾಟವಾಗುತ್ತಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ದೊಡ್ಡ ಆರೋಪ ಮಾಡಿದ್ದಾರೆ. ಟೀಂ ಇಂಡಿಯಾದ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಪಂದ್ಯದ ಟಿಕೆಟ್‌ಗಳಲ್ಲಿ ಇಲ್ಲಿಯವರೆಗೆ ಶೇಕಡಾ 50 ರಷ್ಟು ಕೂಡ ಮಾರಾಟವಾಗಿಲ್ಲ.
ಈ ಇಬ್ಬರೂ ಆಟಗಾರರು ಬಹಳಷ್ಟು ಅಭಿಮಾನಿಗಳನ್ನು ಆಕರ್ಷಿಸುತ್ತಾರೆ. ಅವರು ಆಡದ ಕಾರಣ, ಈ ಪಂದ್ಯಾವಳಿಯ ಮೇಲೆ ಪರಿಣಾಮ ಬೀರಿದೆ. ವಿರಾಟ್ ರಣಜಿ ಟ್ರೋಫಿ ಪಂದ್ಯ ಆಡಲು ಹೋದಾಗಲೂ ಕ್ರೀಡಾಂಗಣ ಬಹುತೇಕ ತುಂಬಿತ್ತು. ಅವರ ಅನುಪಸ್ಥಿತಿಯು ಟಿಕೆಟ್‌ಗಳು ಮಾರಾಟವಾಗದಿರಲು ಒಂದು ದೊಡ್ಡ ಕಾರಣವಾಗಿದೆ ಎಂದು ಆಕಾಶ್ ಹೇಳಿದ್ದಾರೆ.
ಇನ್ನೂ ಹೆಚ್ಚಿನ ಟಿಕೆಟ್‌ಗಳು ಮಾರಾಟವಾಗುತ್ತಿದ್ದವು
ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ, ಭಾರತ ಮತ್ತು ಅಫ್ಘಾನಿಸ್ತಾನ ತಲಾ ಒಂದು ಪಂದ್ಯ ಆಡಿವೆ, ಆದರೆ ಇಲ್ಲಿಯವರೆಗೆ ಯಾವುದೇ ಕ್ರೀಡಾಂಗಣದಲ್ಲಿ ಹೆಚ್ಚಿನ ಅಭಿಮಾನಿಗಳು ಕಾಣಿಸಿಕೊಂಡಿಲ್ಲ. ಇದಕ್ಕೆ ಟಿಕೆಟ್‌ಗಳು ತುಂಬಾ ದುಬಾರಿಯಾಗಿರುವುದೋ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಜನರು ವಾರದ ದಿನಗಳಲ್ಲಿ ಸಂಜೆ ಪಂದ್ಯವನ್ನು ವೀಕ್ಷಿಸಲು ಬರುತ್ತಿಲ್ಲ ಎಂಬುದೋ ಕಾರಣವಲ್ಲ. ಬದಲಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡದಿರುವುದು ದೊಡ್ಡ ವ್ಯತ್ಯಾಸ ತಂದಿದೆ. ಅವರು ಹಾಜರಿದ್ದರೆ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿತ್ತು. 5,000 ಜನರು ಮೊದಲೇ ಬಂದಿದ್ದರೆ, ರೋಹಿತ್ ಮತ್ತು ಕೊಹ್ಲಿ ಅಲ್ಲಿದ್ದರೆ ಕನಿಷ್ಠ 10,000 ರಿಂದ 15,000 ಜನರು ಪಂದ್ಯವನ್ನು ವೀಕ್ಷಿಸಲು ಬರುತ್ತಿದ್ದರು. ಅವರನ್ನು ನೇರವಾಗಿ ನೋಡುವ ಅವಕಾಶ ಅಪರೂಪ, ಆದ್ದರಿಂದ ಅವರ ಅನುಪಸ್ಥಿತಿಯು ಬಹಳ ಮುಖ್ಯ ಎಂದು ಆಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Fri, 12 September 25
