30 ಎಸೆತಗಳಲ್ಲಿ ಪಂದ್ಯ ಗೆದ್ದು ಸೆಮಿಫೈನಲ್​ಗೇರಿದ ಟೀಂ ಇಂಡಿಯಾ..!

ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ, ಜಪಾನ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತದ ಸ್ಪಿನ್ನರ್ ಶ್ರೀ ಚರಣಿ 4 ವಿಕೆಟ್ ಪಡೆದು ಮಿಂಚಿದರೆ, ಶಫಾಲಿ ವರ್ಮಾ ಕೇವಲ 15 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು. ಜಪಾನ್ ಕೇವಲ 57 ರನ್ ಗಳಿಸಿತ್ತು, ಇದನ್ನು ಭಾರತ 5 ಓವರ್‌ಗಳಲ್ಲಿ ಬೆನ್ನಟ್ಟಿತು.

30 ಎಸೆತಗಳಲ್ಲಿ ಪಂದ್ಯ ಗೆದ್ದು ಸೆಮಿಫೈನಲ್​ಗೇರಿದ ಟೀಂ ಇಂಡಿಯಾ..!
ಭಾರತ ಮಹಿಳಾ ತಂಡ
Image Credit source: BCCI Women X

Updated on: Sep 18, 2026 | 3:30 PM

ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ಇಂದು ಭಾರತ ಹಾಗೂ ಜಪಾನ್ ಮಹಿಳಾ ತಂಡಗಳು ಎದುರಾಗಿದ್ದವು. ಐಸಿಸಿ ರ್ಯಾಂಕಿಂಗ್​ನಲ್ಲಿ 39ನೇ ಸ್ಥಾನದಲ್ಲಿರುವ ಜಪಾನ್, ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾಕ್ಕೆ ಸುಲಭ ತುತ್ತಾಗಲಿದೆ ಎಂಬುದು ಈ ಮೊದಲೇ ಗೊತ್ತಿತ್ತು. ಅದರಂತೆ ಏಕಪಕ್ಷೀಯವಾಗಿ ಜಪಾನ್ ತಂಡವನ್ನು ಮಣಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ ಸೆಮಿಫೈನಲ್​ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಜಪಾನ್‌ ಕೇವಲ 57 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 8 ವಿಕೆಟ್​ಗಳ ಜಯ ಸಾಧಿಸಿತು.

ಸ್ಪಿನ್​ ದಾಳಿಗೆ ನಲುಗಿದ ಜಪಾನ್

ಮೊದಲು ಬ್ಯಾಟಿಂಗ್‌ ಮಾಡಿದ ಜಪಾನ್ ತಂಡಕ್ಕೆ ಭಾರತದ ಸ್ಪಿನ್ನರ್​ಗಳ ಮುಂದೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ಅದ್ಭುತ ಫಾರ್ಮ್‌ನಲ್ಲಿರುವ ಎಡಗೈ ಸ್ಪಿನ್ನರ್ ಶ್ರೀ ಚರಣಿ ಸ್ಪಿನ್​ಗೆ ಜಪಾನ್ ತಂಡದ ಬಳಿ ಉತ್ತರವಿರಲಿಲ್ಲ. ಚರಣಿ ಕೇವಲ 10 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದು ತಮ್ಮ ಟಿ20 ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇತ್ತ ಜಪಾನ್ ತಂಡದ ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ಬೌಂಡರಿಗಳು ಮಾತ್ರ ದಾಖಲಾಗಿದ್ದು, ಭಾರತದ ಭಿಗಿ ಬೌಲಿಂಗ್​ಗೆ ಹಿಡಿದ ಕೈಗನ್ನಡಿಯಾಗಿತ್ತು.

ಜಪಾನ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳದಿದ್ದರೂ, ಇತ್ತ ಸರಾಗವಾಗಿ ರನ್ ಕೂಡ ಕಲೆಹಾಕಲಿಲ್ಲ. ಮೊದಲ ವಿಕೆಟ್​ಗೆ 24 ರನ್ ಕಲೆಹಾಕಿತು. ಈ 24 ರನ್ ಬಾರಿಸಲು ಮೊದಲ ಆರು ಓವರ್‌ಗಳನ್ನು ವ್ಯಯಿಸಲಾಯಿತು. ನಂತರ ಏಳನೇ ಓವರ್‌ನಲ್ಲಿ ದಾಳಿಗಿಳಿದ ಶ್ರೀ ಚರಣಿ ಸತತ ಎಸೆತಗಳಲ್ಲಿ ಆರಂಭಿಕ ಆಟಗಾರ್ತಿ ಹರುಣ ಇವಾಸಕಿ ಮತ್ತು ನಾಯಕಿ ಮೈ ಯಾನಗಿಡಾ ಅವರನ್ನು ಔಟ್ ಮಾಡಿದರು. ಇನ್ನೊಂದು ತುದಿಯಿಂದ ಅರೆಕಾಲಿಕ ಆಫ್-ಸ್ಪಿನ್ನರ್ ಶಫಾಲಿ ವರ್ಮಾ ಕೂಡ ಬಿಗಿಯಾದ ಬೌಲಿಂಗ್ ಮಾಡಿ 13 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು.

ಏಷ್ಯನ್ ಗೇಮ್ಸ್​ಗೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ

ಶಫಾಲಿ ಬಿರುಗಾಳಿಯ ಇನ್ನಿಂಗ್ಸ್

ಈ ಗುರಿಗೆ ಪ್ರತಿಯಾಗಿ, ಶಫಾಲಿ ವರ್ಮಾ ಭಾರತಕ್ಕೆ ತ್ವರಿತ ಆರಂಭ ನೀಡಿದರು. ಆದಾಗ್ಯೂ, ಇನ್ನೊಂದು ತುದಿಯಲ್ಲಿ ಎರಡು ವಿಕೆಟ್‌ಗಳು ಬೇಗನೆ ಬಿದ್ದವು. ನಂತರ ಶಫಾಲಿ ವರ್ಮಾ, ರಿಚಾ ಘೋಷ್ ಅವರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಇನ್ನಿಂಗ್ಸ್‌ನಲ್ಲಿ, ಶೆಫಾಲಿ ವರ್ಮಾ 15 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಂತೆ 40 ರನ್ ಬಾರಿಸಿ ಅಜೇಯರಾಗಿ ಉಳಿದರೆ, ರಿಚಾ ಘೋಷ್ 6 ಎಸೆತಗಳಲ್ಲಿ ಅಜೇಯ 12 ರನ್​ಗಳ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಭಾರತ 5 ಓವರ್‌ಗಳಲ್ಲಿ (30 ಎಸೆತಗಳು) 2 ವಿಕೆಟ್‌ಗಳ ನಷ್ಟಕ್ಕೆ ಈ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Fri, 18 September 26

Loading...
Unable to load recommendations.
Follow Us