ಏಷ್ಯಾಕಪ್ನಲ್ಲಿ ಬುಧವಾರ ರಾತ್ರಿ ನಡೆದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ (Pakistan vs Afghanistan) ನಡುವಣ ಪಂದ್ಯ ರಣರೋಚಕವಾಗಿತ್ತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಮ್ಯಾಚ್ನಲ್ಲಿ ಪಾಕ್ 1 ವಿಕೆಟ್ಗಳ ರೋಚಕ ಗೆಲುವು ಕಂಡು ಏಷ್ಯಾಕಪ್ 2022 ಫೈನಲ್ಗೆ ಪ್ರವೇಶ ಪಡೆದಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ಅಫ್ಘಾನ್ ತಂಡದ ಕನಸು ಭಗ್ನವಾಯಿತು. ಇದರ ನಡುವೆ ಪಂದ್ಯದ ಮಧ್ಯೆ ಕ್ರಿಕೆಟ್ ಲೋಕದಲ್ಲಿ ನಾಚಿಕೆ ಪಡುವಂತಹ ಘಟನೆ ನಡೆಯಿತು. ಪಾಕಿಸ್ತಾನ ಬ್ಯಾಟರ್ ಹಾಗೂ ಅಫ್ಘಾನಿಸ್ತಾನ ಬೌಲರ್ ನಡುವೆ ಜಗಳ ನಡೆದು ಬ್ಯಾಟರ್ ಅಸೀಫ್ ಅಲಿ (Asif Ali) ಬೌಲರ್ ಫರೀದ್ ಅಹ್ಮದ್ ಮಲಿಕ್ (Fareed Ahmad Malik) ಅವರಿಗೆ ಬ್ಯಾಟ್ನಿಂದ ಹೊಡೆಯಲು ಮುಂದಾದ ಸನ್ನಿವೇಶ ಜರುಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ಅನೇಕ ಅಭಿಪ್ರಾಯಗಳು ಕೇಳಿಬರುತ್ತಿದೆ.
ಅಫ್ಘಾನಿಸ್ತಾನ ನೀಡಿದ್ದ 129 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್ನಲ್ಲಿ ನಿತ್ತು ಆಡುವ ಬ್ಯಾಟರ್ ಇರಲಿಲ್ಲ. ಈ ಸಂದರ್ಭ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಆಸೀಫ್ ಅಲಿ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ 18 ರನ್ ಚಚ್ಚಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಇವರು ವಿನ್ನಿಂಗ್ ಶಾಟ್ ಹೊಡೆಯಲು ಸಾಧ್ಯವಾಗಲಿಲ್ಲ.
19ನೇ ಓವರ್ನ ಫರೀದ್ ಅಹ್ಮದ್ ಬೌಲಿಂಗ್ನ ಕೊನೆಯ ಎಸೆತದಲ್ಲಿ ಅಸೀಫ್ ಅಲಿ ಔಟಾದರು. ಈ ಸಂದರ್ಭ ಬೌಲರ್ ಸಂಭ್ರಮಿಸುತ್ತಿರುವಾಗ ತಾಳ್ಮೆ ಕಳೆದುಕೊಂಡ ಅಲಿ, ಅಫ್ಘಾನ್ ಪ್ಲೇಯರ್‌ಗೆ ಬ್ಯಾಟ್ನಿಂದ ಹೊಡೆಯಲು ಮುಂದಾಗಿದ್ದಾರೆ. ಆಗ ಮಧ್ಯಪ್ರವೇಶ ಮಾಡಿದ ಅಂಪೈರ್ಗಳು ಹಾಗೂ ಸಹ ಆಟಗಾರರು ಸನ್ನಿವೇಶ ತಿಳಿಗೊಳಿಸಿದ ಘಟನೆ ನಡೆಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಸೀಫ್ ಅಲಿ ನಡವಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
The fight between Asif Ali and the Afghan bowler? Very unfortunate
#PAKvAFG pic.twitter.com/AQzxurWNB7
— Nadir Baloch (@BalochNadir5) September 7, 2022
ಅಸಿಫ್ ಅಲಿ ಬ್ಯಾಟ್ ಎತ್ತಿ ಬೌಲರ್ಗೆ ಹೊಡೆಯಲು ಮುಂದಾಗಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಕೂಡ ಕೆಲ ಬಾರಿ ಈ ರೀತಿಯ ಘಟನೆ ನಡೆದಿದ್ದು, ಇತರೆ ಆಟಗಾರರು ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಇದೀಗ ಅಸೀಫ್ ಅಲಿ ಅವರನ್ನು ಐಸಿಸಿ ಕ್ರಿಕೆಟ್ನಿಂದ ನಿಷೇಧ ಮಾಡಬೇಕು ಎಂದು ಟ್ವಿಟರ್ನಲ್ಲಿ ಅಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ.
ಮತ್ತೊಂದೆಡೆ, ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ. ಪಾಕಿಸ್ತಾನ 1 ವಿಕೆಟ್ಗಳ ರೋಚಕ ಗೆಲುವು ಕಾಣುತ್ತಿದ್ದಂತೆ ಕೆಲವರು ತಾವು ಕುಳಿತುಕೊಂಡಿದ್ದ ಚೇರ್ ಎತ್ತಿ, ಇತರರ ಮೇಲೆ ಎಸೆದಿದ್ದಾರೆ. ಇದರಿಂದ ಅನೇಕರಿಗೆ ಗಾಯಗಳಾಗಿದ್ದು ಈ ಘಟನೆಯ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ ಕೇವಲ 129 ರನ್ಗಳಿಸಿತಷ್ಟೆ. ತಂಡದ ಪರ ಇಬ್ರಾಹಿಂ ಜಾರ್ಡನ್ 35 ರನ್ ಗಳಿಸಿದ್ದು ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಪಾಕ್ ಪರ ಹ್ಯಾರಿಸ್ ರೌಫ್ 2 ವಿಕೆಟ್, ನಸೀಮ್ ಶಾ, ಮೊಹಮ್ಮದ್, ನವಾಜ್ ಹಾಗೂ ಶಹ್ಬಾದ್ ಖಾನ್ ತಲಾ 1 ವಿಕೆಟ್ ಪಡೆದುಕೊಂಡರು.
ಇತ್ತ 130 ರನ್ಗಳ ಗುರಿ ಬೆನ್ನಟ್ಟಿದ ಪಾಕ್ ಕೂಡ ವಿಕೆಟ್ ಕಳೆದುಕೊಂಡೆ ಸಾಗಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಹ್ಮದ್(30) ಹಾಗೂ ಶಾಬ್ದಾದ್ ಖಾನ್(36) ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದರು. ಕೊನೆಯ ಓವರ್ನಲ್ಲಿ ಪಾಕ್ ಗೆಲುವಿಗೆ 11 ರನ್ಗಳು ಬೇಕಿತ್ತು. ಅಫ್ಘಾನ್ ಗೆಲುವಿಗೆ ಪಾಕಿಸ್ತಾನದ 1 ವಿಕೆಟ್ ಮಾತ್ರ ಬೇಕಿತ್ತು. ಈ ಸಂದರ್ಭದಲ್ಲಿ ನಸೀಂ ಶಾ ಮೊದಲ ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಪಾಕ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.