AUS vs PAK: ಟೆಸ್ಟ್ ಸೋಲಿಗೆ ನಾಯಕನ ನಿರ್ಧಾರವೇ ಕಾರಣ ಎಂದ ಪಾಕ್ ತಂಡದ ನಿರ್ದೇಶಕ
AUS vs PAK: ಶಾನ್ ಮಸೂದ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಸರಣಿಯಲ್ಲೇ ಅವಮಾನಕರ ಸೋಲನ್ನು ಎದುರಿಸಿದೆ. ಇದೀಗ ಸರಣಿಯಲ್ಲಿನ ಸೋಲಿನ ಬಗ್ಗೆ ಪಾಕಿಸ್ತಾನ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ಪತ್ರಿಕಾಗೋಷ್ಠಿ ನಡೆಸಿ ನಮ್ಮ ತಂಡ ಎಲ್ಲಿ ಎಡವಿತು? ಮತ್ತು ಮೂರನೇ ಪಂದ್ಯದಲ್ಲಿ ಶಾನ್ ಮಸೂದ್ ಮಾಡಿದ ತಪ್ಪುಗಳೇನು ಎಂಬುದನ್ನು ಹಫೀಜ್ ಬಹಿರಂಗಗೊಳಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Pakistan vs Australia) ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಹೊಸ ನಾಯಕನೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಪಾಕಿಸ್ತಾನ ತಂಡಕ್ಕೆ 3-0 ಅಂತರದ ಸೋಲಿನ ಆಘಾತ ಎದುರಾಗಿದೆ. ಸರಣಿಯ ಕೊನೆಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದ ಆಸ್ಟ್ರೇಲಿಯಾ ಟೆಸ್ಟ್ ರ್ಯಾಂಕಿಂಗ್ ಹಾಗೂ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆದುಕೊಂಡಿದೆ. ಇತ್ತ ಶಾನ್ ಮಸೂದ್ (Shan Masood) ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಸರಣಿಯಲ್ಲೇ ಅವಮಾನಕರ ಸೋಲನ್ನು ಎದುರಿಸಿದೆ. ಇದೀಗ ಸರಣಿಯಲ್ಲಿನ ಸೋಲಿನ ಬಗ್ಗೆ ಪಾಕಿಸ್ತಾನ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ (Mohammad Hafeez) ಪತ್ರಿಕಾಗೋಷ್ಠಿ ನಡೆಸಿ ನಮ್ಮ ತಂಡ ಎಲ್ಲಿ ಎಡವಿತು? ಮತ್ತು ಮೂರನೇ ಪಂದ್ಯದಲ್ಲಿ ಶಾನ್ ಮಸೂದ್ ಮಾಡಿದ ತಪ್ಪುಗಳೇನು ಎಂಬುದನ್ನು ಬಹಿರಂಗಗೊಳಿಸಿದ್ದಾರೆ.
ಜಮಾಲ್‌ಗೆ ಬೇಗ ಬೌಲಿಂಗ್ ನೀಡಬೇಕಿತ್ತು
ವಾಸ್ತವವಾಗಿ ಮೂರನೇ ಟೆಸ್ಟ್ ಗೆಲ್ಲಲು ಆಸೀಸ್ ಪಡೆಗೆ ನಾಲ್ಕನೇ ದಿನ 130 ರನ್‌ಗಳ ಅಗತ್ಯವಿತ್ತು. ಇತ್ತ ಪಾಕಿಸ್ತಾನ ತಂಡ ಈ ಅಲ್ಪ ಸ್ಕೋರ್ ಅನ್ನು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿತ್ತು. ಮೊದಲ ಇನಿಂಗ್ಸ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಪಾಕಿಸ್ತಾನದ ವೇಗದ ಬೌಲರ್ ಜಮಾಲ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ತಡವಾಗಿ ನಾಯಕ ಶಾನ್ ಮಸೂದ್ ಬೌಲಿಂಗ್ ನೀಡಿದರು. ನಾಯಕನ ಈ ನಿರ್ಧಾರದಿಂದಾಗಿ ತಂಡಕ್ಕೆ ಸೋಲು ಎದುರಾಯಿತು ಎಂಬುದು ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ಅಭಿಪ್ರಾಯವಾಗಿದೆ. ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್, ಪಂದ್ಯದಲ್ಲಿ ಪಿಚ್ ಅನ್ನು ಗಮನದಲ್ಲಿಟ್ಟುಕೊಂಡು ಯಾವ ಬೌಲರ್ ಹೆಚ್ಚು ಬೌಲಿಂಗ್ ಮಾಡಬೇಕು ಎಂಬುದು ನಾಯಕನ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಪ್ರಕಾರ ನಾಲ್ಕನೇ ದಿನದಂದು ಶಾನ್ ಮಸೂದ್, ಆಫ್ ಸ್ಪಿನ್ನರ್ ಬದಲಿಗೆ ಜಮಾಲ್‌ಗೆ ಬೇಗ ಬೌಲಿಂಗ್ ಮಾಡಬೇಕಿತ್ತು ಎಂದಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಹೇಳಿದ್ದೇನು?
ಮತ್ತೊಂದೆಡೆ, ಈ ಸಂಪೂರ್ಣ ಸರಣಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಕೆಲವು ಸಮಸ್ಯೆಗಳನ್ನು ಎದುರಿಸಿದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ವಲ್ಪ ವಿಭಿನ್ನವಾಗಿ ಕಂಡುಬಂದಿತು ಮತ್ತು ನಮ್ಮ ಬ್ಯಾಟ್ಸ್‌ಮನ್‌ಗಳು ಅದ್ಭುತವಾಗಿ ಆಡಿದರು. ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ನೀವು ಬೌಲರ್‌ಗಳ ಮೇಲೆ ಒತ್ತಡ ಹೇರಬೇಕು, ಅದನ್ನು ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಮಾಡಿದರು. ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಸರಣಿಯುದ್ದಕ್ಕೂ ನಮ್ಮ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅದರಲ್ಲೂ ಜೋಶ್ ಹ್ಯಾಜಲ್ವುಡ್ ಮೂರನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು ಎಂದಿದ್ದಾರೆ.
ವಾರ್ನರ್ ಬದಲಿಗೆ ಯಾರು?
ಡೇವಿಡ್ ವಾರ್ನರ್ ಬಗ್ಗೆ ಮಾತನಾಡಿದ ಪ್ಯಾಟ್ ಕಮ್ಮಿನ್ಸ್, ಇದು ಡೇವಿಡ್ ವಾರ್ನರ್ ಅವರ ಕೊನೆಯ ಟೆಸ್ಟ್ ಪಂದ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಡೇವಿಡ್ ವಾರ್ನರ್ ಹಲವು ವರ್ಷಗಳಿಂದ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುತ್ತಿದ್ದು, ಈಗ ಯಾವುದೇ ಆಟಗಾರ ತಂಡದಲ್ಲಿ ಅವರ ಸ್ಥಾನ ತುಂಬುವುದು ತುಂಬಾ ಕಷ್ಟ. ಡೇವಿಡ್ ವಾರ್ನರ್ ಆರಂಭದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯದ ದಿಕ್ಕನೇ ಬದಲಿಸುತ್ತಿದ್ದರು. ಇದೀಗ ನಾವು ಡೇವಿಡ್ ವಾರ್ನರ್ ಬದಲಿಗೆ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸುತ್ತೇವೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Sat, 6 January 24