AUS vs SA: ಕಾಂಗರೂಗಳ ಎದುರು ಮಂಡಿಯೂರಿದ ಆಫ್ರಿಕಾ; ಟೆಸ್ಟ್ ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ

| Updated By: ಪೃಥ್ವಿಶಂಕರ

Updated on: Jan 08, 2023 | 3:27 PM

AUS vs SA: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಆಸ್ಟ್ರೇಲಿಯಾ ವಶಪಡಿಸಿಕೊಂಡಿದೆ.

AUS vs SA: ಕಾಂಗರೂಗಳ ಎದುರು ಮಂಡಿಯೂರಿದ ಆಫ್ರಿಕಾ; ಟೆಸ್ಟ್ ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ
ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ
Follow us on

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಆಸ್ಟ್ರೇಲಿಯಾ (Australia Vs South Africa) ವಶಪಡಿಸಿಕೊಂಡಿದೆ. ಕ್ಲೀನ್ ಸ್ವೀಪ್ ಉದ್ದೇಶದೊಂದಿಗೆ ಹರಿಣಗಳ ವಿರುದ್ಧ ಮೂರನೇ ಟೆಸ್ಟ್ ಆಡಲು ಕಣಕ್ಕಿಳಿದ್ದಿದ್ದ ಕಾಂಗರೂಗಳಿಗೆ ವರುಣ ರಾಯ ವಿಲನ್ ಆದ. ಸಿಡ್ನಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್​ಗೆ ಮಳೆ ಕಾಟಕೊಟ್ಟಿದ್ದರಿಂದ ಎರಡು ದಿನಗಳ ಆಟ ಸಂಪೂರ್ಣವಾಗಿ ರದ್ದಾಯಿತು. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಎಂಟ್ರಿಕೊಡದಿದ್ದರೆ ಬ್ರಿಸ್ಬೇನ್, ಮೆಲ್ಬೋರ್ನ್​ನಂತೆಯೇ ಸಿಡ್ನಿಯಲ್ಲಿಯೂ (Sydney Test) ದಕ್ಷಿಣ ಆಫ್ರಿಕಾ ಸೋಲನ್ನು ಎದುರಿಸುವ ಸಾಧ್ಯತೆ ಇತ್ತು. ಇಡೀ ಸರಣಿಯಲ್ಲಿ ಉತ್ತಮ ಪ್ರದರ್ಶನ ನಿಡಿದ ಡೇವಿಡ್ ವಾರ್ನರ್ (David Warner) ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಉಸ್ಮಾನ್ ಖವಾಜಾ (Usman Khawaja) ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಆದರೆ, ಇದೀಗ ಸಿಡ್ನಿ ಟೆಸ್ಟ್ ಡ್ರಾಗೊಂಡಿದ್ದು, ಇದರೊಂದಿಗೆ ದಕ್ಷಿಣ ಆಫ್ರಿಕಾದ 46 ಪಂದ್ಯಗಳ ದಾಖಲೆಯೂ ಮುರಿದಿದೆ. ವಾಸ್ತವವಾಗಿ ದಕ್ಷಿಣ ಆಫ್ರಿಕಾ ಆಡಿರುವ 46 ಟೆಸ್ಟ್ ಪಂದ್ಯಗಳಲ್ಲಿ ಒಂದು ನಿರ್ದಿಷ್ಟ ಫಲಿತಾಂಶ ಹೊರಬೀಳುತ್ತಿತ್ತು. ಅಂದರೆ ಈ 46 ಪಂದ್ಯಗಳಲ್ಲಿ ಒಂದೋ ಆಫ್ರಿಕಾ ಸೋಲುತ್ತಿತ್ತು, ಅಥವಾ ಗೆಲ್ಲುತ್ತಿತ್ತು. ಆದರೆ ಈ 47ನೇ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯಗೊಳ್ಳುವುದರೊಂದಿಗೆ ಒಂದು ನಿರ್ದಿಷ್ಟ ಫಲಿತಾಂಶದ ರೆಕಾರ್ಡ್​ ಬ್ರೇಕ್ ಆಗಿದೆ. ಈ ಪಂದ್ಯಕ್ಕೂ ಮೊದಲು ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾ, ಆ ಬಳಿಕ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಹಾಗೂ 182 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು.

AUS vs SA: ಕಾಂಗರೂಗಳ ಎದುರು ಮಂಡಿಯೂರಿದ ಆಫ್ರಿಕಾ; ಟೆಸ್ಟ್ ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ

ಕೊನೆಯ ದಿನದಲ್ಲಿ ಆಸೀಸ್ ಮುಂದಿತ್ತು ಸವಾಲು

ಸಿಡ್ನಿ ಟೆಸ್ಟ್‌ನ ಕೊನೆಯ ದಿನದಂದು ದಕ್ಷಿಣ ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 225 ರನ್​ಗಳಿಗೆ ಕಟ್ಟಿ ಹಾಕಿದ್ದ ಆಸ್ಟ್ರೇಲಿಯಾ 220 ರನ್‌ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಹರಿಣಗಳಿಗೆ ಫಾಲೋ ಆನ್ ಹೆರಿದ ಕಾಂಗರೂಗಳು 50 ಓವರ್​ಗಳ ಒಳಗೆ ಆಫ್ರಿಕಾದ 10 ವಿಕೆಟ್​ಗಳನ್ನು ಕಬಳಿಸಬೇಕಿತ್ತು. ಆದರೆ ಸೋಲಿನ ದವಡೆಯಿಂದ ಪಾರಾಗಲು ಯತ್ನಿಸಿದ ಆಫ್ರಿಕಾ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್‌ ಕಳೆದುಕೊಂಡು 106 ರನ್ ಗಳಿಸಿತು.

ಮಳೆಯಿಂದ ಸಿಡ್ನಿ ಟೆಸ್ಟ್ ಡ್ರಾ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಉಸ್ಮಾನ್ ಖವಾಜಾ ಅವರ ಶತಕದ ಆಧಾರದ ಮೇಲೆ 4 ವಿಕೆಟ್‌ ಕಳೆದುಕೊಂಡು 475 ರನ್​ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದರೆ ಈ ಟೆಸ್ಟ್ ಪಂದ್ಯದ 2 ದಿನಗಳು ಮಳೆಗೆ ತುತ್ತಾದರಿಂದ ಗೆಲುವಿನ ಹೊಸ್ತಿಲಿನಲ್ಲಿದ್ದ ಆಸ್ಟ್ರೇಲಿಯಾ ಡ್ರಾಗೆ ತೃಪ್ತಿ ಪಟ್ಟುಕೊಳ್ಳುವಂತ್ತಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Sun, 8 January 23