ಕಾಮೆಂಟರಿ ವೇಳೆ ರಿಕಿ ಪಾಂಟಿಂಗ್‌ಗೆ ಎದೆನೋವು; ಆಸ್ಪತ್ರೆಗೆ ದಾಖಲಾದ ಆಸೀಸ್ ಮಾಜಿ ನಾಯಕ
Ricky Ponting: ನನಗೆ ಹುಷಾರಿಲ್ಲ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಹೋಗಬೇಕೆಂದು ಜೊತೆಯಲ್ಲಿ ಕಾಮೆಂಟರಿ ಮಾಡುತ್ತಿದ್ದವರ ಬಳಿ ಪಾಂಟಿಂಗ್ ಹೇಳಿಕೊಂಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ವೈದ್ಯಕೀಯ ತಂಡ ರಿಕಿ ಪಾಂಟಿಂಗ್ರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿದೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ (Ricky Ponting) ಅವರನ್ನು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ (Australia vs West Indies) ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಕಾಮೆಂಟರಿ ಮಾಡುತ್ತಿದ್ದರು. ಈ ವೇಳೆ ರಿಕಿ ಪಾಂಟಿಂಗ್‌ಗೆ ಎದೆನೋವು (chest pain) ಕಾಣಿಸಿಕೊಂಡಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಪಾಂಟಿಂಗ್ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪರ್ತ್ ಟೆಸ್ಟ್‌ನಲ್ಲಿ ರಿಕಿ ಪಾಂಟಿಂಗ್ ಚಾನೆಲ್ 7 ಪರ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದರು. ಈ ವೇಳೆ ಪಂದ್ಯದ ಊಟದ ವಿರಾಮದ ವೇಳೆ ಪಾಂಟಿಂಗ್‌ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕಾಮೆಂಟರಿ ಕೊಠಡಿಯಿಂದ ಹೊರಬಂದ ಪಾಂಟಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಶ್ವದ ಬೆಸ್ಟ್ ಆಟಗಾರನನ್ನು ಬದಿಗಿಟ್ಟು ಮತ್ಯಾರನ್ನೋ ಆಡಿಸುತ್ತಿದ್ದಾರೆ; ಬಿಸಿಸಿಐ ಕಾಲೆಳೆದ ಪಾಕ್ ಮಾಜಿ ನಾಯಕ
ಪಾಂಟಿಂಗ್‌ಗೆ ಎದೆನೋವು ಕಾಣಿಸಿಕೊಂಡಿತ್ತು
ಪಂದ್ಯದ ಮೂರನೇ ದಿನದ ಊಟದ ಸಮಯದಲ್ಲಿ ಪಾಂಟಿಂಗ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ನನಗೆ ಹುಷಾರಿಲ್ಲ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಹೋಗಬೇಕೆಂದು ಜೊತೆಯಲ್ಲಿ ಕಾಮೆಂಟರಿ ಮಾಡುತ್ತಿದ್ದವರ ಬಳಿ ಪಾಂಟಿಂಗ್ ಹೇಳಿಕೊಂಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ವೈದ್ಯಕೀಯ ತಂಡ ರಿಕಿ ಪಾಂಟಿಂಗ್ರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಿದ್ಧತೆ ಮಾಡಿದೆ. ನಂತರ ಪಾಂಟಿಂಗ್ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ ಚಾನೆಲ್ 7 ವಕ್ತಾರರು, “ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದು, ಇಂದಿನ (ಶುಕ್ರವಾರ) ಪಂದ್ಯದ ಉಳಿದ ಸಮಯದಲ್ಲಿ ಅವರು ಕಾಮೆಂಟರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಪಂದ್ಯದಲ್ಲಿ ಆಸ್ಟ್ರೇಲಿಯಾ ಭಿಗಿ ಹಿಡಿತ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 598 ರನ್ ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ತಂಡದ ಪರವಾಗಿ ಮಾರ್ನಸ್ ಲಬುಶೆನ್ 204 ಮತ್ತು ಸ್ಟೀವ್ ಸ್ಮಿತ್ 200 ರನ್ ಗಳಿಸಿ ಮಿಂಚಿದರು. ಅದೇ ಸಮಯದಲ್ಲಿ ಟ್ರಾವಿಸ್ ಹೆಡ್ ಕೂಡ 99 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ 283 ರನ್‌ಗಳಿಗೆ ಆಲೌಟ್ ಆಯಿತು. ಕೆರಿಬಿಯನ್ ತಂಡದ ಪರ ಕ್ರೇಗ್ ಬ್ರಾಥ್ ವೈಟ್ 64, ಚಂದ್ರಪಾಲ್ 51 ಹಾಗೂ ಬ್ಲಾಕ್ ವುಡ್ 36 ರನ್ ಗಳಿಸಿದರು. ಟ್ರಾವಿಸ್ ಹೆಡ್ 99 ರನ್ ಗಳಿಸಿ ಆಫ್ ಸ್ಪಿನ್ನರ್ ಕ್ರೈಗ್ ಬ್ರಾಥ್‌ವೈಟ್ ಬೌಲಿಂಗ್‌ನಲ್ಲಿ ಔಟಾದ ನಂತರ ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿದ್ದರಿಂದ ಸ್ಮಿತ್ 200 ರನ್ ಪೂರೈಸಿ ಅಜೇಯರಾಗಿ ಉಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 2 December 22