
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಡೆಲ್ಲಿ ಕ್ಯಾಫಿಟಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ನ 51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 142 ರನ್ ಕಲೆಹಾಕಿದ್ದರು. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 14.2 ಓವರ್‌ಗಳಲ್ಲಿ ಚೇಸ್ ಮಾಡಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಫಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್, “ಕೇವಲ ಎರಡು-ಮೂರು ಓವರ್‌ಗಳಲ್ಲಿ ನಾವು ಐದು ವಿಕೆಟ್‌ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯ ನಮ್ಮ ಕೈತಪ್ಪಿತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಆರಂಭ ಉತ್ತಮವಾಗಿದ್ದರೂ ನಂತರ ಹಠಾತ್ ವಿಕೆಟ್ ಕಳೆದುಕೊಂಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಈ ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿದ್ದರೂ, ನಮ್ಮ ಸ್ಪಿನ್ನರ್‌ಗಳು ಅದರ ಲಾಭ ಪಡೆಯುವಲ್ಲಿ ಎಡವಿದರು ಎಂದು ಅಕ್ಷರ್ ಒಪ್ಪಿಕೊಂಡಿದ್ದಾರೆ. ಪಿಚ್ ವರ್ತಿಸಿದ ರೀತಿ ನೋಡಿದರೆ, ಸ್ಪಿನ್ನರ್‌ಗಳು ಸಾಕಷ್ಟು ತಪ್ಪುಗಳನ್ನು ಮಾಡಿದರು ಎನಿಸುತ್ತದೆ. ನಾವು ಇದಕ್ಕಿಂದಲೂ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬ್ಯಾಟಿಂಗ್ ವೈಫಲ್ಯ ಹಾಗೂ ಸತತವಾಗಿ ವಿಕೆಟ್ ಬೀಳುತ್ತಿರುವಾಗ ಅದನ್ನು ಹೇಗೆ ತಡೆಯಬಹುದು ಎಂಬ ಪ್ರಶ್ನೆಗೆ ಸರಳ ಉತ್ತರ ನೀಡಿದ ಅಕ್ಷರ್. “ಇದಕ್ಕೆ ಯಾವುದೇ ಸಂಕೀರ್ಣ ಪರಿಹಾರವಿಲ್ಲ. ವಿಕೆಟ್‌ಗಳು ಬೀಳುತ್ತಿರುವಾಗ ಒಂದೆರಡು ಓವರ್‌ಗಳ ಕಾಲ ತಾಳ್ಮೆಯಿಂದ ಕ್ರೀಸ್‌ನಲ್ಲಿ ನಿಂತು ಒತ್ತಡವನ್ನು ಹೀರಿಕೊಳ್ಳಬೇಕು. ಆ ಮೈಂಡ್‌ಸೆಟ್ ಅಳವಡಿಸಿಕೊಳ್ಳುವುದು ಬಹಳ ಮುಖ್ಯ,” ಎಂದಿದ್ದಾರೆ.
ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!
ಟೂರ್ನಿಯ ಮುಂದಿನ ಪಂದ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಕ್ಷರ್, ಈ ವರ್ಷದ ತಪ್ಪುಗಳಿಂದ ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ. ಮುಂದಿನ ವರ್ಷದ ದೃಷ್ಟಿಯಿಂದ ತಂಡದಲ್ಲಿ ಯಾವ ಬದಲಾವಣೆ ಮಾಡಬಹುದು ಮತ್ತು ಬೆಂಚ್‌ನಲ್ಲಿರುವ ಆಟಗಾರರಿಗೆ ಹೇಗೆ ಅವಕಾಶ ನೀಡಬಹುದು ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಆಲೋಚಿಸಲಿದೆ. ಈ ಮೂಲಕ ಮುಂದಿನ ವರ್ಷಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸುವ ಸುಳಿವು ನೀಡಿದ್ದಾರೆ.
ಒಟ್ಟಾರೆಯಾಗಿ, ಅಕ್ಷರ್ ಅವರ ಮಾತುಗಳು ತಂಡದಲ್ಲಿ ತಾಂತ್ರಿಕ ಬದಲಾವಣೆಗಿಂತ ಹೆಚ್ಚಾಗಿ ಮಾನಸಿಕ ಸ್ಥಿರತೆ ಮತ್ತು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಡುವ ಜಾಣ್ಮೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿವೆ. ಈ ಎಲ್ಲಾ ತಪ್ಪುಗಳನ್ನು ತಿದ್ದಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಮ್ಯಾಚ್ನಲ್ಲಿ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.