ಬದೋನಿ ಬ್ಯೂಟಿ… ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
Emerging Asia Cup 2024: ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಇದೀಗ ಯುಎಇ ವಿರುದ್ಧ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಭಾರತ ಎ ತಂಡವು ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ20 ಟೂರ್ನಿಯ ಸೆಮಿಫೈನಲ್ಗೆ ಪ್ರವೇಶಿಸಿದೆ.
ಒಮಾನ್ನಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯ 8ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಆಯುಷ್ ಬದೋನಿ ಅತ್ಯಾಕರ್ಷಕ ಡೈವಿಂಗ್ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಅಲ್ ಎಮಿರಾತ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಎ ಮತ್ತು ಯುಎಇ ಎ ತಂಡಗಳು ಮುಖಾಮುಖಿಯಾಗಿದ್ದವು.
ಅದರಂತೆ ಮೊದಲು ಬ್ಯಾಟ್ ಮಾಡಿದ ಯುಎಇ ತಂಡವು ಭಾರತೀಯ ಬೌಲರ್ಗಳ ಸಾಂಘಿಕ ದಾಳಿಯಿಂದಾಗಿ ರನ್ಗಳಿಸಲು ಪರದಾಡಿದ್ದರು. ಇನ್ನು ರಮಣ್ದೀಪ್ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಜವಾದುಲ್ಲಾ ಲಾಂಗ್ ಆನ್ನತ್ತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಯುವ ಆಟಗಾರ ಆಯುಷ್ ಬದೋನಿ ಓಡಿ ಬಂದು ಅತ್ಯುತ್ತಮವಾಗಿ ಡೈವಿಂಗ್ ಕ್ಯಾಚ್ ಹಿಡಿದರು.
ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ಎ ತಂಡವು 16.5 ಓವರ್ಗಳಲ್ಲಿ 107 ರನ್ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಎ ಪರ ಅಭಿಷೇಕ್ ಶರ್ಮಾ (58) ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಈ ಮೂಲಕ ಭಾರತ ಎ ತಂಡವು 10.5 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.