BAN vs NED: ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ನೆದರ್ಲೆಂಡ್ಸ್; 9 ರನ್‌ಗಳಿಂದ ಗೆದ್ದ ಬಾಂಗ್ಲಾ
T20 World Cup 2022: ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶಕ್ಕೆ ಕಠಿಣ ಹೋರಾಟ ನೀಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಸಂಪೂರ್ಣ 20 ಓವರ್‌ಗಳನ್ನು ಆಡಿದ ಈ ತಂಡ 135 ರನ್‌ಗಳಿಗೆ ಆಲೌಟ್ ಆಯಿತು.
ಹೋಬರ್ಟ್‌ನ ಬ್ಯಾಲೆರಿವ್ ಓವಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟಿ20 ವಿಶ್ವಕಪ್ (T20 World Cup 2022) ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ (Bangladesh) ನೆದರ್ಲೆಂಡ್ಸ್ (Netherlands) ತಂಡದೆದರು ಒಂಬತ್ತು ರನ್‌ಗಳಿಂದ ಗೆದ್ದುಬೀಗಿದೆ. ಇದರೊಂದಿಗೆ ಬಾಂಗ್ಲಾದೇಶ ತನ್ನ ಐಸಿಸಿ ಟಿ20 ವಿಶ್ವಕಪ್-2022 ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಎಂಟು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶಕ್ಕೆ ಕಠಿಣ ಹೋರಾಟ ನೀಡಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಸಂಪೂರ್ಣ 20 ಓವರ್‌ಗಳನ್ನು ಆಡಿದ ಈ ತಂಡ 135 ರನ್‌ಗಳಿಗೆ ಆಲೌಟ್ ಆಯಿತು.
ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ನಾಲ್ಕು ಓವರ್‌ಗಳಲ್ಲಿ 25 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಮತ್ತೊಂದೆಡೆ, ನೆದರ್ಲೆಂಡ್ಸ್ ಪರ ಕಾಲಿನ್ ಅಕರ್ಮನ್ 62 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 48 ಎಸೆತಗಳನ್ನು ಎದುರಿಸಿದ ಕಾಲಿನ್, ಆರು ಬೌಂಡರಿಗಳ ಜೊತೆಗೆ ಎರಡು ಸಿಕ್ಸರ್‌ಗಳನ್ನು ಸಹ ಬಾರಿಸಿದರು. ಆದರೆ ಇವರನ್ನು ಹೊರತುಪಡಿಸಿ ತಂಡದ ಬೇರೆ ಯಾವುದೇ ಬ್ಯಾಟ್ಸ್‌ಮನ್ ಗೆಲುವಿಗಾಗಿ ಹೋರಾಟ ನಡೆಸಲಿಲ್ಲ. ಪರಿಣಾಮವಾಗಿ ನೆದರ್ಲೆಂಡ್ಸ್ ತಂಡ ಬಾಂಗ್ಲಾದೇಶ ಎದುರು ಮುಗ್ಗರಿಸಿತು.
ಇದನ್ನೂ ಓದಿ: IND vs PAK: 30 ವರ್ಷಗಳ ಬಳಿಕ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ಬಾಬರ್..!
ಗೆಲುವಿಗಾಗಿ ಹೋರಾಟ ನಡೆಸಿದ ನೆದರ್ಲ್ಯಾಂಡ್ಸ್
145 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಒಂದೇ ಬಾರಿಗೆ ಕೇವಲ 15 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಛಲ ಬಿಡದೆ ಹೋರಾಟ ಮುಂದುವರಿಸಿದ ಈ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಕಾಲಿನ್ ಅವರಿಗೆ ಉತ್ತಮ ಸಾಥ್ ನೀಡುವುದರೊಂದಿಗೆ ತಂಡದ ಸ್ಕೋರನ್ನು 50ರ ಗಡಿ ದಾಟಿಸಿದರು. ಆ ಬಳಿಕ16 ರನ್ ಗಳಿಸಿ ಶಕೀಬ್ ಅಲ್ ಹಸನ್ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಆ ಬಳಿಕ 101 ರನ್ ಗಳಿಸುವಷ್ಟರಲ್ಲೇ ನೆದರ್ಲೆಂಡ್ಸ್ ತಂಡ ತನ್ನ ಒಂಬತ್ತು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಕಾಲಿನ್ ಕೂಡ ಅರ್ಧಶತಕ ಸಿಡಿಸಿ ಪೆವಿಲಿಯನ್‌ಗೆ ಮರಳಿದ್ದರು. ಆದರೂ ಹೋರಾಟ ಬಿಡದ ನೆದರ್ಲೆಂಡ್ಸ್ ತಂಡದ ಆಟಗಾರರು ಬಾಂಗ್ಲಾದೇಶ ತಂಡಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡಲು ಅವಕಾಶ ನೀಡಲಿಲ್ಲ. ನೆದರ್ಲೆಂಡ್ಸ್ ತಂಡದ ಪಾಲ್ ವ್ಯಾನ್ ಮೀಕೆರೆನ್ ಕೊನೆ ಕೊನೆಯಯಲ್ಲಿ ವೇಗವಾಗಿ ರನ್ ಗಳಿಸುವುದರೊಂದಿಗೆ ಬಾಂಗ್ಲಾ ಪಡೆಗೆ ಆತಂಕ ಹುಟ್ಟಿಸಿದರು. ಆದರೆ ಅವರು 14 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.
ಬಾಂಗ್ಲಾದೇಶದ ಬ್ಯಾಟಿಂಗ್ ಕೂಡ ಕಳಪೆಯಾಗಿತ್ತು
ಬಾಂಗ್ಲಾದೇಶ ಈ ಪಂದ್ಯವನ್ನು ಗೆದ್ದಿರಬಹುದು, ಆದರೆ ತಂಡದ ಬ್ಯಾಟಿಂಗ್ ದುರ್ಬಲವಾಗಿತ್ತು. ದುರ್ಬಲ ತಂಡ ಎಂದು ಪರಿಗಣಿಸಲ್ಪಟ್ಟ ನೆದರ್ಲೆಂಡ್ಸ್ ವಿರುದ್ಧವೂ ದೊಡ್ಡ ಮೊತ್ತವನ್ನು ಗಳಿಸಲು ಬಾಂಗ್ಲಾ ತಂಡಕ್ಕೆ ಸಾಧ್ಯವಾಗಲಿಲ್ಲ. ಬಾಂಗ್ಲಾದೇಶ ಪರ 27 ಎಸೆತಗಳಲ್ಲಿ 38 ರನ್ ಗಳಿಸಿದ ಅಫೀಫ್ ಹೊಸೈನ್ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಅವರು ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಹ ಬಾರಿಸಿದರು. ನಜ್ಮುಲ್ ಹೊಸೈನ್ ಶಾಂಟೊ 20 ಎಸೆತಗಳಲ್ಲಿ 25 ರನ್ ಗಳಿಸಿದರೆ, ಸೌಮ್ಯ ಸರ್ಕಾರ್ 14 ರನ್ ಗಳ ಇನಿಂಗ್ಸ್ ಆಡಿದರು. ಮೌಸದೇಕ್ ಹೊಸೈನ್ 20 ರನ್ ಗಳಿಸಿದರೆ, ನೂರುಲ್ ಹಸನ್ 13 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Mon, 24 October 22