ಡೊಮಿನಿಕಾದಲ್ಲಿ ನಡೆದ ವೆಸ್ಟ್ ಇಂಡೀಸ್ (West Indies vs Bangladesh) ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ಗಾಗಿ ಬಾಂಗ್ಲಾದೇಶಕ್ಕೆ ಪಂದದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಸಮಯಕ್ಕಿಂತ ನಿಧಾನವಾಗಿ ಓವರ್ಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಈ ದಂಡ ವಿಧಿಸಿದರು. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದರೆ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡವನ್ನು ವಿಧಿಸಲಾಗುತ್ತದೆ.
ತಂಡದ ನಿಧಾನಗತಿಯ ಬೌಲಿಂಗ್ ತಪ್ಪನ್ನು ಬಾಂಗ್ಲಾದೇಶದ ನಾಯಕ ಮಹಮ್ಮದುಲ್ಲಾ ಒಪ್ಪಿಕೊಂಡಿದ್ದು, ಹೀಗಾಗಿ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ ಎಂದು ಮ್ಯಾಚ್ ರೆಫರಿ ತಿಳಿಸಿದ್ದಾರೆ. ಆನ್-ಫೀಲ್ಡ್ ಅಂಪೈರ್‌ಗಳಾದ ಲೆಸ್ಲಿ ರೈಫರ್ ಜೂನಿಯರ್ ಮತ್ತು ನಿಗೆಲ್ ಡುಗಿಡ್, ಮೂರನೇ ಅಂಪೈರ್ ಗ್ರೆಗೊರಿ ಬ್ರಾಥ್‌ವೈಟ್ ಮತ್ತು ನಾಲ್ಕನೇ ಅಂಪೈರ್ ಪ್ಯಾಟ್ರಿಕ್ ಗುಸ್ಟರ್ಡ್ ಅವರು ರೆಫರಿಗೆ ಬಾಂಗ್ಲಾದೇಶದ ವಿರುದ್ದ ಸ್ಲೋ ಓವರ್ ರೇಟ್ ದೂರನ್ನು ನೀಡಿದ್ದರು. ಇತ್ತ ಪಂದ್ಯ ಸೋತಿದ್ದ ಬಾಂಗ್ಲಾದೇಶ ತಂಡವು ಇದೀಗ ಪಂದ್ಯದ ಶುಲ್ಕದ ಶೇ.20 ರಷ್ಟು ದಂಡ ಪಾವತಿಸಬೇಕಾಗಿ ಬಂದಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ತಂಡವು 6 ವಿಕೆಟ್ ನಷ್ಟಕ್ಕೆ 158 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ವಿಂಡೀಸ್ 35 ರನ್ಗಳಿಂದ ಭರ್ಜರಿ ಜಯ ಸಾಧಿಸಿತು. ವೆಸ್ಟ್ ಇಂಡೀಸ್ ಪರ 28 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 61 ರನ್ ಬಾರಿಸಿದ್ದ ರೋವ್ಮನ್ ಪೊವೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.