India T20 WC Squad: ಕೊಹ್ಲಿಗೆ ಅಗ್ನಿಪರೀಕ್ಷೆ: ಫಾರ್ಮ್ಗೆ ಬರದಿದ್ರೆ ಟಿ20 ವಿಶ್ವಕಪ್ ತಂಡದಿಂದ ಔಟ್
India T20 WC Squad: ತಂಡದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಇದ್ದು, ಇವರಲ್ಲಿ ಯಾರನ್ನು ಬೇಕಾದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು.
ಟೀಮ್ ಇಂಡಿಯಾದ ರನ್ ಮೆಷಿನ್, ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಬೆನ್ನೆಲುಬಾಗಿದ್ದ ಕೊಹ್ಲಿ ಇದೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ. ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ ಭಾರತದ ಪರ 10 ಟಿ20 ಪಂದ್ಯಗಳನ್ನು ಆಡಿದ್ದರು. ಈ ವೇಳೆ 279 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕಲೆಹಾಕಿದ್ದು ಕೇವಲ 368 ರನ್ ಮಾತ್ರ. ಇತ್ತ ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಕೂಡ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಂಡವನ್ನು ರೂಪಿಸಲು ಭರ್ಜರಿ ಪ್ಲ್ಯಾನ್ಗಳು ನಡೆಯುತ್ತಿವೆ. ಆದರೆ ಈ ಪ್ಲ್ಯಾನ್ನಲ್ಲಿ ವಿರಾಟ್ ಕೊಹ್ಲಿಯನ್ನು ಕೈ ಬಿಡುವ ಬಗ್ಗೆ ಕೂಡ ಚರ್ಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದರೆ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯ ಸ್ಥಾನ ಇನ್ನೂ ಕೂಡ ಖಚಿತವಾಗಿಲ್ಲ.
ಇಂಗ್ಲೆಂಡ್ ವಿರುದ್ದ ನಡೆಯಲಿರುವ 2 ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದ ಮೂಲಕ ಅವರು ತಮ್ಮ ಫಾರ್ಮ್ ಅನ್ನು ಖಚಿತಪಡಿಸಿಕೊಳ್ಳಬೇಕಿದೆ. ಒಂದು ವೇಳೆ ಅವರ ಕಳಪೆ ಫಾರ್ಮ್ ಮುಂದುವರೆದರೆ ಟಿ20 ವಿಶ್ವಕಪ್ ತಂಡದಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
ಅಂದರೆ ಮುಂಬರುವ ಟಿ20 ಸರಣಿಗಳು ವಿರಾಟ್ ಕೊಹ್ಲಿಯ ಪಾಲಿಗೆ ಅಗ್ನಿಪರೀಕ್ಷೆ. ಅದರಲ್ಲೂ ಏಷ್ಯಾಕಪ್ ಬಳಿಕ ಟಿ20 ವಿಶ್ವಕಪ್ಗಾಗಿ ಬಲಿಷ್ಠ ಟೀಮ್ ಇಂಡಿಯಾವನ್ನು ರೂಪಿಸಲಿದೆ. ಅಂದರೆ ಏಷ್ಯಾಕಪ್ನಲ್ಲಿ ಕೊಹ್ಲಿ ಅಬ್ಬರಿಸಲೇಬೇಕು. ಈ ಟೂರ್ನಿಯಲ್ಲಿ ವಿಫಲರಾದರೆ ಟಿ20 ತಂಡದಿಂದ ಗೇಟ್ ಪಾಸ್ ಸಿಗುವುದರಲ್ಲಿ ಡೌಟೇ ಇಲ್ಲ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಕೊಹ್ಲಿ ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಬಹುದು. ಆದರೆ ಪ್ರಸ್ತುತ ಅವರ ಫಾರ್ಮ್ ಮತ್ತು ರನ್‌ಗಾಗಿ ಅವರ ಹೋರಾಟ ಈಗ ಆತಂಕಕಾರಿಯಾಗಿದೆ. ಆಯ್ಕೆದಾರರು ಫಾರ್ಮ್‌ನಲ್ಲಿ ಜನರನ್ನು ಆಯ್ಕೆ ಮಾಡಬೇಕಾಗುತ್ತದೆ. ಯಾವುದೇ ಆಟಗಾರನನ್ನು ಖ್ಯಾತಿಯ ಮೇಲೆ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಈಗ ಕೊಹ್ಲಿಗಿದೆ. ಅವರು ಇಂಗ್ಲೆಂಡ್‌ನಲ್ಲಿ ರನ್ ಗಳಿಸದಿದ್ದರೆ T20 ವಿಶ್ವಕಪ್‌ಗೆ ಬೇರೆ ಆಯ್ಕೆಗಳನ್ನು ಹುಡಕಲಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದಾಗ್ಯೂ ವಿಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಫಾರ್ಮ್ ಕಂಡುಕೊಳ್ಳಲು ಏಷ್ಯಾಕಪ್ನಲ್ಲಿ ಕೊನೆಯ ಬಾರಿ ಅವಕಾಶ ನೀಡಬಹುದು. ಇದರಲ್ಲೂ ವಿಫಲರಾದರೆ ಟಿ20 ವಿಶ್ವಕಪ್ ತಂಡದಿಂದ ವಿರಾಟ್ ಕೊಹ್ಲಿ ಹೊರಬೀಳುವುದು ಖಚಿತ ಎನ್ನಬಹುದು.
ಪ್ರಸ್ತುತ ಮಾಹಿತಿ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯು ವಿರಾಟ್ ಕೊಹ್ಲಿಯ ಪಾಲಿಗೆ ನಿರ್ಣಾಯಕವಾಗಿದೆ. ಈ ಸರಣಿಯಲ್ಲಿ ಕೊಹ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಉಳಿದ ಸರಣಿಗಳಿಗೆ ಕೊಹ್ಲಿಯ ಆಯ್ಕೆ ನಿರ್ಧಾರವಾಗಲಿದೆ. ಏಕೆಂದರೆ ಈಗಾಗಲೇ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಟೀಮ್ ಇಂಡಿಯಾ ಪರ ಆಟಗಾರರ ದಂಡೇ ಇದೆ.
ತಂಡದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಇದ್ದು, ಇವರಲ್ಲಿ ಯಾರನ್ನು ಬೇಕಾದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು. ಇಂತಹದೊಂದು ಆಯ್ಕೆಗಳು ಇರುವುದರಿಂದಲೇ ಬಿಸಿಸಿಐ ವಿರಾಟ್ ಕೊಹ್ಲಿಯ ಫಾರ್ಮ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ದದ ಸರಣಿಯ ಮೂಲಕ ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ.
ವಿರಾಟ್ ಕೊಹ್ಲಿ ಟಿ20 ಅಂಕಿ ಅಂಶಗಳು ಹೀಗಿವೆ:
- -ಒಟ್ಟಾರೆ: 97 ಪಂದ್ಯಗಳು / ರನ್‌ಗಳು- 3296 / ಸರಾಸರಿ- 51.5
- -ಕಳೆದ 6 ಪಂದ್ಯಗಳ ಸರಾಸರಿ 26 ಕ್ಕೆ ಕುಸಿದಿದೆ.
- -ನವೆಂಬರ್ 2019 ರಿಂದ ಒಂದೇ ಒಂದು ಶತಕ ಬಾರಿಸಿಲ್ಲ.
- -ಐಪಿಎಲ್ 2022 ರಲ್ಲಿ 16 ಪಂದ್ಯಗಳಿಂದ 22.73 ರ ಸರಾಸರಿಯಲ್ಲಿ ಕೇವಲ 341 ರನ್ ಗಳಿಸಿದ್ದರು.