AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ನಮ್ಮನ್ನು ಅವಮಾನಿಸಿದೆ… ನಾವು ಶ್ರೀಲಂಕಾದಲ್ಲಿ ಆಡ್ತೀವಿ..!

T20 World Cup 2026: ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಒಟ್ಟು 4 ಪಂದ್ಯಗಳನ್ನಾಡಲಿದೆ. ಮೊದಲ ಮೂರು ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿಗದಿಯಾದರೆ, ಕೊನೆಯ ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿದೆ. ಆದರೀಗ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಪಂದ್ಯವನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಐಸಿಸಿಗೆ ಮನವಿ ಮಾಡಿದೆ.

ಭಾರತ ನಮ್ಮನ್ನು ಅವಮಾನಿಸಿದೆ... ನಾವು ಶ್ರೀಲಂಕಾದಲ್ಲಿ ಆಡ್ತೀವಿ..!
Bangladesh
ಝಾಹಿರ್ ಯೂಸುಫ್
|

Updated on: Jan 08, 2026 | 1:12 PM

Share

2026ರ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡ ಕಣಕ್ಕಿಳಿಯುವುದೆಲ್ಲಿ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯಕ್ಕಂತು ಉತ್ತರ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಬಾಂಗ್ಲಾದೇಶ್ ಹಿಂದೇಟು ಹಾಕಿದೆ. ಬದಲಾಗಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ. ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಇದಾಗ್ಯೂ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ನಿಲುವು ಬದಲಿಸಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್​​ನಲ್ಲಿ ಹಿಂದೂಗಳ ಮೇಲಿನ ನಡೆಯುತ್ತಿರುವ ದೌರ್ಜನ್ಯ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿ ಇತ್ತೀಚೆಗೆ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಈ ಪ್ರತಿಭಟನೆ ವೇಳೆ ಬಾಂಗ್ಲಾದೇಶ್ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕೆಕೆಆರ್ ಪರ ಕಣಕ್ಕಿಳಿಯಲು ಬಿಡುವುದಿಲ್ಲ ಎಂದು ಕೆಲ ಸಂಘಟನೆಗಳು ಘೋಷಿಸಿದ್ದವು. ಹೀಗಾಗಿ ಐಪಿಎಲ್​ನಿಂದ ಬಾಂಗ್ಲಾ ವೇಗಿಯನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್​ನಿಂದ ಕೈ ಬಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್​ನಲ್ಲಿ ತಮ್ಮ ತಂಡದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಭಾರತದಲ್ಲಿ ಓರ್ವ ಆಟಗಾರನಿಗೆ ಸಂಪೂರ್ಣ ಸುರಕ್ಷತೆ ನೀಡಲು ಸಾಧ್ಯವಾಗದೇ ಇದ್ದರೆ, ಬಿಸಿಸಿಐ ಹೇಗೆ ಬಾಂಗ್ಲಾದೇಶ್ ತಂಡಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಹೀಗಾಗಿ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿದೆ. ಬಿಸಿಬಿಯ ಈ ಮನವಿಯ ಹೊರತಾಗಿಯೂ, ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಪಂದ್ಯದಿಂದ ವಾಕ್ ಓವರ್ ಪಡೆಯಿರಿ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಇದಾಗ್ಯೂ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ್ ಒಪ್ಪಿಲ್ಲ.

ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್, ಪ್ರಶ್ನೆ ಕೇವಲ ಭದ್ರತೆಯ ಬಗ್ಗೆ ಮಾತ್ರವಲ್ಲ. ಈ ವಿಷಯದಲ್ಲಿ ದೇಶದ ಘನತೆಯ  ಕೂಡ ಇದೆ. ಹೀಗಾಗಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶ್ರೀಲಂಕಾದಲ್ಲಿ ಬಾಂಗ್ಲಾದೇಶ್ ಪಂದ್ಯವನ್ನು ಆಯೋಜಿಸಬೇಕೆಂದು ಮತ್ತೊಮ್ಮೆ ಐಸಿಸಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಭಾರತದಲ್ಲಿ ಬಾಂಗ್ಲಾದೇಶಿ ಕ್ರಿಕೆಟಿಗರ ಭದ್ರತಾ ಸಮಸ್ಯೆಯ ಪ್ರಮಾಣವನ್ನು ಐಸಿಸಿ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಾಂಗ್ಲಾದೇಶ್ ಆಟಗಾರನನ್ನು ಕೈ ಬಿಡುವ ಮೂಲಕ ಅವರು ಬಾಂಗ್ಲಾದೇಶ್​ ತಂಡವು  ಭಾರತದಲ್ಲಿ ಆಡುವುದು ಸುರಕ್ಷಿತವಲ್ಲ ಎಂದು ಸಾರಿದ್ದಾರೆ. ಇದಾಗ್ಯೂ ಐಸಿಸಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ನಜ್ರುಲ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನಿಗೆ ಶಸ್ತ್ರಚಿಕಿತ್ಸೆ… ತಂಡದಿಂದ ಔಟ್..!

ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್ ಟೂರ್ನಿಯಿಂದ ಹೊರಹಾಕುವ ಮೂಲಕ ಅವರು ಅವಮಾನ ಮಾಡಿದ್ದಾರೆ. ಹೀಗಾಗಿ ಭಾರತದಲ್ಲಿ ಆಡುವುದು ಇದು ಕೇವಲ ಭದ್ರತಾ ಸಮಸ್ಯೆಯಲ್ಲ. ನಮ್ಮ ದೇಶದ ಘನತೆಯ ವಿಷಯವೂ ಆಗಿದೆ. ಭಾರತವು ಬಾಂಗ್ಲಾದೇಶವನ್ನು ಅವಮಾನಿಸಿದೆ. ಈ ಅವಮಾನದ ಕಾರಣ ನಮ್ಮ ತಂಡ ಭಾರತದಲ್ಲಿ ಆಡಬಾರದು ಎಂಬುದು ನನ್ನ ನಿಲುವು ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್ ಹೇಳಿದ್ದಾರೆ.