ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..!
India vs Namibia: ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ನಮೀಬಿಯ ತಂಡವು 18.2 ಓವರ್ಗಳಲ್ಲಿ 116 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 93 ರನ್ಗಳ ಭರ್ಜರಿ ಜಯ ಸಾಧಿಸಿದೆ.

T20 World Cup 2026: ಟಿ20 ವಿಶ್ವಕಪ್ನ 18ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ನಮೀಬಿಯ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪವರ್ಪ್ಲೇನಲ್ಲಿ 86 ರನ್ ಕಲೆಹಾಕಿದ್ದರು. ಈ ವೇಳೆ ದಾಳಿಗಿಳಿದ ನಮೀಬಿಯ ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಕುತಂತ್ರವನ್ನು ಪ್ರಯೋಗಿಸಲು ಮುಂದಾಗಿದ್ದರು.
ಪಂದ್ಯದ 8ನೇ ಓವರ್ನ ಕೊನೆಯ ಎಸೆತವನ್ನು ಅರ್ಧದಲ್ಲೇ ಎಸೆಯುವ ಮೂಲಕ ಗೆರ್ಹಾರ್ಡ್ ಎರಾಸ್ಮಸ್ ಓವರ್ ಮುಗಿಸಲು ಯತ್ನಿಸಿದ್ದರು. ಆದರೆ ಈ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಕರೆದಿದ್ದಾರೆ. ಇದರಿಂದ ಎರಾಸ್ಮಸ್ ಹಾಗೂ ಅಂಪೈರ್ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಇದಾಗ್ಯೂ ಫೀಲ್ಡ್ ಅಂಪೈರ ತನ್ನ ನಿರ್ಧಾರ ಬದಲಿಸಿರಲಿಲ್ಲ.
ಡೆಡ್ ಬಾಲ್ ತೀರ್ಪು ನೀಡಿದ್ದೇಕೆ?
ಎರಾಸ್ಮಸ್ ಅವರು ಬೌಲಿಂಗ್ ಕ್ರೀಸ್‌ಗಿಂತ ಬಹಳ ಹಿಂದಿನಿಂದ (ಸುಮಾರು ಅರ್ಧ ರನ್-ಅಪ್‌ನಲ್ಲೇ) ಚೆಂಡನ್ನು ಎಸೆದಿದ್ದರು. ಇದು ಅಂಪೈರ್ ರೋಡ್ ಟಕರ್ ಅವರ ದೃಷ್ಟಿ ವ್ಯಾಪ್ತಿಯಿಂದ ಆಚೆಗಿತ್ತು, ಅಂದರೆ ಅಂಪೈರ್ ಚೆಂಡು ಎಸೆದದ್ದನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದರು.
ಐಸಿಸಿ ನಿಯಮವೇನು?
ಐಸಿಸಿ ಕ್ರಿಕೆಟ್ ನಿಯಮಗಳ ಪ್ರಕಾರ, ಬೌಲರ್ ಬ್ಯಾಟರ್‌ನ ಗಮನವನ್ನು ಉದ್ದೇಶಪೂರ್ವಕವಾಗಿ ಬೇರೆಡೆ ಸೆಳೆಯಲು ಅಥವಾ ವಿಚಿತ್ರ ರೀತಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನಿಸಿದರೆ, ಅಂಪೈರ್‌ಗೆ ಅದನ್ನು ‘ಡೆಡ್ ಬಾಲ್’ ಎಂದು ಕರೆಯುವ ಅಧಿಕಾರವಿರುತ್ತದೆ.
ಇಲ್ಲಿ ಗೆರ್ಹಾರ್ಡ್ ಎರಾಸ್ಮಸ್ ಅಂಪೈರ್ನ ಹಿಂದಿನಿಂದ ಅಂದರೆ, ಕ್ರೀಸ್ನಿಂದ ಬಹಳ ಹಿಂಬದಿಯಿಂದ ಚೆಂಡೆಸೆದಿದ್ದಾರೆ. ಈ ಎಸೆತವನ್ನು ಅಂಪೈರ್‌ಗೆ ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಎರಾಸ್ಮಸ್ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಲಾಯಿತು.
ಸಾಮಾನ್ಯವಾಗಿ ಬ್ಯಾಟ್ಸ್ಮನ್ ಎಸೆತಕ್ಕೆ ಸಿದ್ಧರಿಲ್ಲದಿದ್ದಾಗ ಅಥವಾ ಬೌಲರ್ ಅನಿರೀಕ್ಷಿತವಾಗಿ ಚೆಂಡನ್ನು ಎಸೆದಾಗ ಡೆಡ್ ಬಾಲ್ ತೀರ್ಪು ನೀಡಲಾಗುತ್ತದೆ. ಆದರೆ ಈ ಬಾರಿ ಅಂಪೈರ್ ರೋಡ್ ಟಕರ್ ರನ್ ಅಪ್ನ ಅರ್ಧದಲ್ಲೇ ಚೆಂಡೆಸೆದಿರುವ ಕಾರಣ ಡೆಡ್ ಬಾಲ್ ಘೋಷಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಂಪೈರ್ ಅವರ ಈ ತೀರ್ಪು ಮೈದಾನದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ವಿಶೇಷವೆಂದರೆ, ಆ ಎಸೆತವು ‘ವೈಡ್’ ಆಗಿತ್ತು. ಆದರೆ ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಿದ್ದರಿಂದ ಭಾರತಕ್ಕೆ ಆ ಒಂದು ರನ್ ಸಿಗಲಿಲ್ಲ. ಅಂತಿಮವಾಗಿ ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ಗೆರ್ಹಾರ್ಡ್ ಎರಾಸ್ಮಸ್ ಕೇವಲ 20 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: ಹೀಗಾದಲ್ಲಿ ಟಿ20 ವಿಶ್ವಕಪ್ನಿಂದ ಆಸ್ಟ್ರೇಲಿಯಾ ಔಟ್..!
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಮೀಬಿಯ ತಂಡವು 18.2 ಓವರ್ಗಳಲ್ಲಿ 116 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 93 ರನ್ಗಳ ಭರ್ಜರಿ ಜಯ ಸಾಧಿಸಿದೆ.
Published On - 10:11 am, Sat, 14 February 26
