AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಸಿನಿಮಾ ‘ರಾಮಾಯಣ’

ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಜಾಗತಿಕವಾಗಿ ತೆರೆಕಾಣಲಿರುವ ‘ರಾಮಾಯಣ’ ಸಿನಿಮಾದಿಂದ ಪ್ರೇಕ್ಷಕರಿಗೆ ಅದ್ಭುತವಾದ ಅನುಭವ ಸಿಗಲಿದೆ. ಅದಕ್ಕಾಗಿ ಮಾಮೂಲಿ ಚಿತ್ರಮಂದಿರಗಳ ಜೊತೆಗೆ ‘ಸ್ಕ್ರೀನ್‌ಎಕ್ಸ್’ ಮತ್ತು ‘4ಡಿಎಕ್ಸ್’ ರೂಪದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಸಿನಿಮಾ ‘ರಾಮಾಯಣ’
Ramayana Still
ಮದನ್​ ಕುಮಾರ್​
|

Updated on: Aug 18, 2026 | 8:32 PM

Share

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರವು ಈ ವರ್ಷದ ದೀಪಾವಳಿ ಹಬ್ಬಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈ ಬಿಗ್ ಬಜೆಟ್ ಸಿನಿಮಾ ವಿಶ್ವದಾದ್ಯಂತ ‘ಸ್ಕ್ರೀನ್‌ಎಕ್ಸ್’ (ScreenX) ಹಾಗೂ ‘4ಡಿಎಕ್ಸ್’ (4DX) ಫಾರ್ಮ್ಯಾಟ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ.

ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿದ್ದು, ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರು ‘ರಾಮಾಯಣ’ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಸಿನಿಮಾದ ತಾಂತ್ರಿಕ ಗುಣಮಟ್ಟ ಯಾವ ರೀತಿ ಎಂಬುದು ಗೊತ್ತಾಗಿದೆ. ಅದನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾದಿದ್ದಾರೆ.

ಅದ್ದೂರಿಯಾಗಿ ಬಿಡುಗಡೆ ಆಗಲಿದೆ ರಾಮಾಯಣ:

‘ಸಿಜೆ 4ಡಿಪ್ಲೆಕ್ಸ್’ (CJ 4DPLEX) ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ವಿಶ್ವದಾದ್ಯಂತ ಸುಮಾರು 1,300 ಸ್ಕ್ರೀನ್‌ಎಕ್ಸ್ ಮತ್ತು 4ಡಿಎಕ್ಸ್ ಥಿಯೇಟರ್‌ಗಳಲ್ಲಿ ‘ರಾಮಾಯಣ’ ಪ್ರದರ್ಶನಗೊಳ್ಳಲಿದೆ. ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ಸ್ಕ್ರೀನ್‌ಎಕ್ಸ್ ವಿಶೇಷತೆ ಏನು?

ಸ್ಕ್ರೀನ್‌ಎಕ್ಸ್ ಪರದೆಗಳು ಪ್ರೇಕ್ಷಕರಿಗೆ 270-ಡಿಗ್ರಿ ವಿಶಾಲ ದೃಶ್ಯದ ಅನುಭವ ನೀಡಲು ಮುಖ್ಯ ಪರದೆಯ ಜೊತೆಗೆ ಥಿಯೇಟರ್‌ನ ಅಕ್ಕಪಕ್ಕದ ಗೋಡೆಗಳ ಮೇಲೆಯೂ ದೃಶ್ಯಗಳು ವಿಸ್ತರಿಸಲ್ಪಡುತ್ತವೆ. ‘ರಾಮಾಯಣ’ ಚಿತ್ರದ ಕೆಲವು ಪ್ರಮುಖ ಸಾಹಸ ಹಾಗೂ ಭಾವುಕ ದೃಶ್ಯಗಳನ್ನು ಈ ತಂತ್ರಜ್ಞಾನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ

ಏನಿದು 4ಡಿಎಕ್ಸ್ ತಂತ್ರಜ್ಞಾನ?

4ಡಿಎಕ್ಸ್ ತಂತ್ರಜ್ಞಾನವು ಪ್ರೇಕ್ಷಕರಿಗೆ ಕೇವಲ ದೃಶ್ಯವಲ್ಲದೆ ನೈಜ ಅನುಭವ ನೀಡುತ್ತದೆ. ಚಲಿಸುವ ಸೀಟುಗಳು, ಗಾಳಿ, ನೀರು, ಹಿಮ, ಸುವಾಸನೆ ಹಾಗೂ ಲೈಟಿಂಗ್ ಎಫೆಕ್ಟ್‌ಗಳ ಮೂಲಕ ಸಿನಿಮಾದ ದೃಶ್ಯಗಳಿಗೆ ಜೀವ ತುಂಬಲಾಗುತ್ತದೆ. ಈಗಾಗಲೇ ಅನೇಕ ಹಾಲಿವುಡ್ ಸಿನಿಮಾಗಳನ್ನು ಈ ರೀತಿಯಲ್ಲಿ ವೀಕ್ಷಿಸಿರುವ ಪ್ರೇಕ್ಷಕರು ಈಗ ‘ರಾಮಾಯಣ’ ಸಿನಿಮಾವನ್ನು ಕೂಡ 4ಡಿಎಕ್ಸ್ ತಂತ್ರಜ್ಞಾನದಲ್ಲಿ ವೀಕ್ಷಿಸುವ ಅವಕಾಶ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us