Steve Smith: ಟಿ20 ಕ್ರಿಕೆಟ್ನಲ್ಲಿ ತೂಫಾನ್ ಶತಕ ಸಿಡಿಸಿದ ಸ್ಟೀವ್ ಸ್ಮಿತ್
BBL 2023: 204 ರನ್ಗಳ ಗುರಿ ಪಡೆದ ಅಡಿಲೇಡ್ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಹಾಗೂ ಅಲೆಕ್ಸ್ ಕ್ಯಾರಿ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದರು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಸ್ಟೀವ್ ಸ್ಮಿತ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಬಿಬಿಎಲ್ನ 45ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದ ಸ್ಮಿತ್ ಚೊಚ್ಚಲ ಸೆಂಚುರಿ ಬಾರಿಸಿ ಬ್ಯಾಟ್ ಮೇಲೆತ್ತಿದ್ದರು. ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅಡಿಲೇಡ್ ತಂಡದ ನಾಯಕ ಟ್ರಾವಿಡ್ ಹೆಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಸಿಡ್ನಿ ಸಿಕ್ಸರ್ಸ್ ಪರ ಸ್ಟೀವ್ ಸ್ಮಿತ್ ಹಾಗೂ ಜೋಶ್ ಫಿಲಿಪೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಕೇವಲ 1 ರನ್ಗಳಿಸಿ ಫಿಲಿಪೆ ವಿಕೆಟ್ ಕೈಚೆಲ್ಲಿದರೆ, ಅತ್ತ ಸ್ಮಿತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಆರಂಭದಲ್ಲಿ ತುಸು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಮಿತ್ ಆ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದರು. ತಂಡದ ಮೊತ್ತ 50ರ ಗಡಿದಾಟುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಮುಂದಾದ ಆಸೀಸ್ ಆಟಗಾರ ಅಡಿಲೇಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಸ್ಟೀವ್ ಸ್ಮಿತ್ ಬ್ಯಾಟ್ನಿಂದ 7 ಭರ್ಜರಿ ಸಿಕ್ಸರ್ಗಳು ಮೂಡಿಬಂತು.
ಅಷ್ಟೇ ಅಲ್ಲದೆ 15 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಇದರ ನಡುವೆ 56 ಎಸೆತಗಳಲ್ಲಿ 5 ಫೋರ್ ಹಾಗೂ 7 ಸಿಕ್ಸ್ನೊಂದಿಗೆ ಭರ್ಜರಿ ಶತಕವನ್ನೂ ಕೂಡ ಪೂರೈಸಿದರು. ವಿಶೇಷ ಎಂದರೆ ಇದು ಸ್ಟೀವ್ ಸ್ಮಿತ್ ಅವರ ಚೊಚ್ಚಲ ಬಿಗ್ ಬ್ಯಾಷ್ ಲೀಗ್ ಶತಕವಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪಿಚ್ನಲ್ಲಿ ಸ್ಮಿತ್ ಶತಕ ಬಾರಿಸಿದ್ದಾರೆ.
Also Read: Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
ಇದಕ್ಕೂ ಮುನ್ನ ಟಿ20 ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ ಏಕೈಕ ಶತಕ ಬಾರಿಸಿದ್ದಾರೆ. ಅದು ಕೂಡ ಐಪಿಎಲ್ನಲ್ಲಿ ಎಂಬುದು ವಿಶೇಷ. ಅಂದರೆ ಆಸ್ಟ್ರೇಲಿಯಾ ಪರ 51 ಟಿ20 ಇನಿಂಗ್ಸ್ ಆಡಿರುವ ಸ್ಮಿತ್ 4 ಅರ್ಧಶತಕ ಬಾರಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ಅವರ ಈ ಶತಕದ ನೆರವಿನಿಂದ ಸಿಡ್ನಿ ಸಿಕ್ಸರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.
Not often you get the chance to catch a Steve Smith six in Coffs Harbour! ?#BBL12 pic.twitter.com/pP3tMz1ltf
— KFC Big Bash League (@BBL) January 17, 2023
204 ರನ್ಗಳ ಗುರಿ ಪಡೆದ ಅಡಿಲೇಡ್ ಸ್ಟ್ರೈಕರ್ಸ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಹಾಗೂ ಅಲೆಕ್ಸ್ ಕ್ಯಾರಿ ಮಾತ್ರ ಉತ್ತಮ ಪ್ರದರ್ಶನ ನೀಡಿದ್ದರು. 24 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಹಾಗೂ 3 ಫೋರ್ನೊಂದಿಗೆ 40 ರನ್ ಬಾರಿಸುವ ಮೂಲಕ ಶಾರ್ಟ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಅಲೆಕ್ಸ್ ಕ್ಯಾರಿ 35 ಎಸೆತಗಳಲ್ಲಿ 54 ರನ್ ಚಚ್ಚಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಅಂತಿಮವಾಗಿ 19 ಓವರ್ಗಳಲ್ಲಿ 144 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 59 ರನ್ಗಳಿಂದ ಅಡಿಲೇಡ್ ಸ್ಟ್ರೈಕರ್ಸ್ ಸೋಲೊಪ್ಪಿಕೊಂಡಿತು. ಸಿಡ್ನಿ ಸಿಕ್ಸರ್ಸ್ ಪರ ಭರ್ಜರಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಿಡ್ನಿ ಸಿಕ್ಸರ್ಸ್ ಪ್ಲೇಯಿಂಗ್ 11: ಜೋಶ್ ಫಿಲಿಪೆ , ಸ್ಟೀವನ್ ಸ್ಮಿತ್ , ಕುರ್ಟಿಸ್ ಪ್ಯಾಟರ್ಸನ್ , ಮೊಯ್ಸೆಸ್ ಹೆನ್ರಿಕ್ಸ್ (ನಾಯಕ) , ಜೋರ್ಡಾನ್ ಸಿಲ್ಕ್ , ಹೇಡನ್ ಕೆರ್ , ಡೇನಿಯಲ್ ಕ್ರಿಶ್ಚಿಯನ್ , ಬೆನ್ ದ್ವಾರ್ಶುಯಿಸ್ , ಸೀನ್ ಅಬಾಟ್ , ಸ್ಟೀವ್ ಓಕೀಫ್ , ಟಾಡ್ ಮರ್ಫಿ.
ಅಡಿಲೇಡ್ ಸ್ಟ್ರೈಕರ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಟ್ರಾವಿಸ್ ಹೆಡ್ (ನಾಯಕ) , ಅಲೆಕ್ಸ್ ಕ್ಯಾರಿ, ಆಡಮ್ ಹೋಸ್ , ಕಾಲಿನ್ ಡಿ ಗ್ರ್ಯಾಂಡ್ಹೋಮ್, ಥಾಮಸ್ ಕೆಲ್ಲಿ, ಬೆನ್ ಮಾನೆಂಟಿ , ಕ್ಯಾಮೆರಾನ್ ಬಾಯ್ಸ್ , ವೆಸ್ ಅಗರ್ , ಹೆನ್ರಿ ಥಾರ್ನ್ಟನ್ , ಹ್ಯಾರಿ ಕಾನ್ವೇ.
Published On - 9:22 pm, Tue, 17 January 23




