Champions Trophy BCCI Reward: ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಮ್ ಇಂಡಿಯಾಗೆ ರೂ. 58 ಕೋಟಿ ಘೋಷಿಸಿದ ಬಿಸಿಸಿಐ
BCCI Cash Prize for Team India: ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಿದ್ದ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಟೀಮ್ ಇಂಡಿಯಾ. ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ಇದೀಗ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿದೆ. ಅದು ಕೂಡ ಬರೋಬ್ಬರಿ 58 ಕೋಟಿ ರೂ. ಬಹುಮಾನ ಮೊತ್ತ ಘೋಷಿಸುವ ಮೂಲಕ ಎಂಬುದು ವಿಶೇಷ.

ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ (Team India) ಬಿಸಿಸಿಐ (BCCI) 58 ಕೋಟಿ ರೂ.ಗಳ ಬೃಹತ್ ನಗದು ಬಹುಮಾನವನ್ನು ಘೋಷಿಸಿದೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಶ್ರೇಷ್ಠ ಸಾಧನೆಯನ್ನು ಗೌರವಿಸುವ ಸಲುವಾಗಿ ಇದೀಗ 58 ಕೋಟಿ ರೂ. ನಗದು ಬಹುಮಾನ ಘೋಷಿಸಲಾಗಿದ್ದು, ಈ ಮೊತ್ತವನ್ನು ಆಟಗಾರರು, ತರಬೇತಿ ಮತ್ತು ಸಹಾಯಕ ಸಿಬ್ಬಂದಿಗಳು ಹಂಚಿಕೊಳ್ಳಲಿದ್ದಾರೆ.
ಈ ಹಿಂದೆ 2024 ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ನೀಡಿತ್ತು. ಈ ಬಹುಮಾನ ಮೊತ್ತವನ್ನು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಹಂಚಲಾಗಿದೆ. ಇಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಇನ್ನುಳಿದ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ. ನಿಗದಿ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಈ ಬಾರಿ 58 ಕೋಟಿ ರೂ. ಅನ್ನು ಟೀಮ್ ಇಂಡಿಯಾ ಸದಸ್ಯರಿಗೆ ಹಂಚಲಾಗುತ್ತದೆ.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 251 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 49 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಜಯ ಸಾಧಿಸಿತ್ತು. ಈ ಮೂಲಕ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು.
ಇದಕ್ಕೂ ಮುನ್ನ 2002 ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಹಾಗೂ 2013 ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದ್ದರು. ಇದೀಗ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡವು ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: IPL 2025: RCB ಗಿಂತ ಡೆಲ್ಲಿ ಪಡೆಯಲ್ಲೇ ಕನ್ನಡಿಗರ ದರ್ಬಾರು
Published On - 11:33 am, Thu, 20 March 25