ಟೀಮ್ ಇಂಡಿಯಾಗೆ ಅರ್ಧ ಶತಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ
India Women vs South Africa Women, Final: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿ 52 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ಭಾರತ ಮಹಿಳಾ ತಂಡ ಚೊಚ್ಚಲ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಗೈದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ಮಂಡಳಿ ಅರ್ಧ ಶತಕೋಟಿಗೂ ಅಧಿಕ ಬಹುಮಾನ ಮೊತ್ತ ಘೋಷಿಸಿದೆ.
ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿರುವ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ 51 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಈ ಬಗ್ಗೆ ಮಾತನಾಡಿದ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಟೀಮ್ ಇಂಡಿಯಾ ಪ್ರದರ್ಶನದಿಂದಾಗಿ ಬಿಸಿಸಿಐಗೆ ತುಂಬಾ ಸಂತೋಷವಾಗಿದೆ. ಈ ಸ್ಮರಣೀಯ ಗೆಲುವಿಗಾಗಿ ಬಿಸಿಸಿಐ 51 ಕೋಟಿ ರೂ. 51 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡಲಿದೆ ಎಂದು ತಿಳಿಸಿದ್ದಾರೆ.
ಈ 51 ಕೋಟಿ ರೂ. ಅನ್ನು ಟೀಮ್ ಇಂಡಿಯಾ ಆಟಗಾರರು, ಆಯ್ಕೆದಾರರು ಮತ್ತು ಅಮೋಲ್ ಮುಝುಂದಾರ್ ನೇತೃತ್ವದ ಸಹಾಯಕ ಸಿಬ್ಬಂದಿಗೆ ನೀಡಲಾಗುವುದು ಎಂದು ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
125 ಕೋಟಿ ಪಡೆದಿದ್ದ ಪುರುಷರ ತಂಡ:
2024ರ ಟಿ20 ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ಈ ಬಹುಮಾನವನ್ನು ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಗಳಿಗೆ ಹಂಚಲಾಗಿತ್ತು. ಅದರಂತೆ…
- ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡ 15 ಆಟಗಾರರು ತಲಾ 5 ಕೋಟಿ ರೂ. ಪಡೆದಿದ್ದರು.
- ಟೀಮ್ ಇಂಡಿಯಾದ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಶುಭಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್ ತಲಾ 1 ಕೋಟಿ ರೂ. ಲಭಿಸಿತ್ತು.
- ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ 5 ಕೋಟಿ ರೂ. ನೀಡಲಾಗಿತ್ತು.
- ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರಿಗೆ ತಲಾ 2.5 ಕೋಟಿ ರೂ. ಲಭಿಸಿತ್ತು.
- ಟೀಮ್ ಇಂಡಿಯಾ ಫಿಸಿಯೋಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್ ಮತ್ತು ತುಳಸಿ ರಾಮ್ ಯುವರಾಜ್ಗೆ ತಲಾ 2 ಕೋಟಿ ರೂ. ಪಡೆದಿದ್ದರು.
- ಭಾರತ ತಂಡ ಥ್ರೋಡೌನ್ ಸ್ಪೆಷಲಿಸ್ಟ್ಗಳಾದ ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ ಮತ್ತು ದಯಾನಂದ್ ಗರಾನಿಗೆ ತಲಾ 2 ಕೋಟಿ ರೂ. ಪಡೆದಿದ್ದರು.
- ಟೀಮ್ ಇಂಡಿಯಾ ಮಸಾಜ್ ಥೆರಪಿಸ್ಟ್‌ಗಳಾದ ರಾಜೀವ್ ಕುಮಾರ್ ಮತ್ತು ಅರುಣ್ ಕಾನಡೆಗೆ ತಲಾ 2 ಕೋಟಿ ರೂ. ಭಾರತ ತಂಡದ ಸ್ಟ್ರೆಂಗ್ತ್ ಅ್ಯಂಡ್ ಕಂಡೀಷನಿಂಗ್ ಕೋಚ್ ಸೋಹಮ್ ದೇಸಾಯಿಗೆ 2 ಕೋಟಿ ರೂ. ನೀಡಲಾಗಿತ್ತು.
- ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ 1 ಕೋಟಿ ರೂ. ಪಡೆದಿದ್ದರು.
ಇದೀಗ ಇದೇ ಮಾದರಿಯಲ್ಲಿ ಭಾರತ ಮಹಿಳಾ ತಂಡಕ್ಕೆ ನೀಡಲಾದ 51 ಕೋಟಿ ರೂ. ಬಹುಮಾನ ಮೊತ್ತವನ್ನು ಹಂಚಲಾಗುತ್ತದೆ.
ಇದನ್ನೂ ಓದಿ: Laura Wolvaardt: ಕೈ ಕೊಟ್ಟ ವಿಶ್ವಕಪ್ನಲ್ಲೂ ಕೈ ಹಿಡಿದ ವಿಶ್ವ ದಾಖಲೆ
ಐಸಿಸಿಯಿಂದ ಸಿಕ್ಕ ಬಹುಮಾನ ಮೊತ್ತ ಎಷ್ಟು?
- ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಬಹುಮಾನ ಮೊತ್ತವಾಗಿ 4.48 ಅಮೆರಿಕನ್ ಮಿಲಿಯನ್ ಡಾಲರ್ ಲಭಿಸಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 40 ಕೋಟಿ ರೂ.
- ರನ್ನರ್ ಅಪ್ ಆಗಿರುವ ಸೌತ್ ಆಫ್ರಿಕಾ 2.24 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಮೊತ್ತವಾಗಿ ಪಡೆದುಕೊಂಢಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 20 ಕೋಟಿ ರೂ.
Published On - 10:23 am, Mon, 3 November 25
