
ಬಿಸಿಸಿಐ (BCCI) ತನ್ನ ನೂತನ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅಳೆದು ತೂಗಿ ಆಟಗಾರರಿಗೆ ಗ್ರೇಡ್ ನೀಡಿದೆ. ಈ ಬಾರಿಯ ಕೇಂದ್ರ ಒಪ್ಪಂದದಲ್ಲಿ ಮುಂಬಡ್ತಿ ಪಡೆದವರಿಗಿಂತ ಹಿಂಬಡ್ತಿ ಪಡೆದವರ ಸಂಖ್ಯೆಯೇ ಹೆಚ್ಚಿದೆ. ಇದರ ಜೊತೆಗೆ ಕಳೆದ ಬಾರಿ ಕೇಂದ್ರ ಒಪ್ಪಂದಕ್ಕೆ ಒಳಪಟ್ಟಿದ್ದ ಕೆಲವು ಆಟಗಾರರನ್ನು ಈ ಬಾರಿ ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಇದರರ್ಥ ಹಿಂಬಡ್ತಿ ಪಡೆದ ಆಟಗಾರರು ಈ ಹಿಂದೆ ವಾರ್ಷಿಕವಾಗಿ ಪಡೆಯುತ್ತಿದ್ದ ವೇತನದಲ್ಲಿ ಇಳಿಕೆ ಕಂಡಿದ್ದರೆ, ಕೇಂದ್ರ ಒಪ್ಪಂದದಿಂದ ಕೈಬಿಟ್ಟಿರುವ ಆಟಗಾರರು ವಾರ್ಷಿಕ ವೇತನದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ಈ ಒಪ್ಪಂದಕ್ಕೊಳಪಡದ ಆಟಗಾರರು ತಂಡದ ಪರ ಪಂದ್ಯವನ್ನಾಡಿದರೆ, ಮಾದರಿಗನುಗುಣವಾಗಿ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ.
ಬಿಸಿಸಿಐ ಹಿಂಬಡ್ತಿ ನೀಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರದ್ದು ಪ್ರಮುಖ ಹೆಸರು. ಇವರಿಬ್ಬರು ಪ್ರಸ್ತುತ ಏಕದಿನ ಮಾದರಿಯಲ್ಲಿ ಆಡುತ್ತಿರುವುದರಿಂದ ಇವರಿಬ್ಬರಿಗೆ ಎ+ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಅದೇ ರೀತಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರನ್ನು ಸಹ ಎ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಇದರರ್ಥ ಈ ಬಾರಿ ಈ ಆರು ಆಟಗಾರರ ವೇತನದಲ್ಲಿ ಇಳಿಕೆ ಕಂಡುಬರಲಿದೆ. ಈ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಾರ್ಷಿಕವಾಗಿ ತಲಾ 4 ಕೋಟಿ ರೂಗಳನ್ನು ಕಳೆದುಕೊಂಡರೆ, ಉಳಿದ ನಾಲ್ವರು ಆಟಗಾರರು ತಲಾ 2 ಕೋಟಿ ರೂ. ಕಡಿಮೆ ವೇತನ ಪಡೆಯಲಿದ್ದಾರೆ.
6 ಆಟಗಾರರಿಗೆ ಹಿಂಬಡ್ತಿ ನೀಡಿದ್ದರೆ, ಇನ್ನು ಕೆಲವು ಆಟಗಾರರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಪ್ರಸ್ತುತ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ಇಶಾನ್ ಕಿಶನ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ. ಇದಕ್ಕೆ ಕಾರಣ, ಕಳೆದ ಆವೃತ್ತಿಯಲ್ಲಿ ಕಿಶನ್ ತಂಡದ ಭಾಗವಾಗಿರಲಿಲ್ಲ. ಉಳಿದಂತೆ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಕೂಡ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಫಾರ್ಮ್, ಲಭ್ಯತೆ ಮತ್ತು ತಂಡದಲ್ಲಿನ ಪಾತ್ರವನ್ನು ಆಧರಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ವರು ಆಟಗಾರರು ಸಹ ಬಹಳ ಸಮಯದಿಂದ ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡಿಲ್ಲ.
ಕೇಂದ್ರ ಒಪ್ಪಂದಕ್ಕೊಳಪಟ್ಟಿರುವ 51 ಆಟಗಾರರಿಗೆ ಬಿಸಿಸಿಐ ನೀಡುವ ವೇತನವೆಷ್ಟು?
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದ ಪಟ್ಟಿಗೆ ಸೇರ್ಪಡೆಗೊಂಡ ಆಟಗಾರ್ತಿಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಕಳೆದ ಆವೃತ್ತಿಯಲ್ಲಿ ಕೇವಲ 16 ಮಹಿಳಾ ಆಟಗಾರ್ತಿಯರು ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದರೆ, ಈ ಆವೃತ್ತಿಯಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದ ನೀಡಲಾಗಿದೆ. ಆದಾಗ್ಯೂ, ಪೂಜಾ ವಸ್ತ್ರಕರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಮತ್ತು ಟೈಟಾಸ್ ಸಾಧು ಕೇಂದ್ರ ಒಪ್ಪಂದದಿಂದ ವಂಚಿತರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Mon, 9 February 26