
ಐಪಿಎಲ್‌ನಲ್ಲಿ (IPL) ಭಾಗಶಃ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವ ಐಪಿಎಲ್‌ನ ಪ್ರಮುಖ ನಿಯಮಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ (IPL Impact Player Rule) ಕೂಡ ಒಂದು. ರೋಹಿತ್ ಶರ್ಮಾ ಸೇರಿದಂತೆ ಹಲವು ತಂಡಗಳ ನಾಯಕರು ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಬಿಸಿಸಿಐ ಈ ನಿಯಮವನ್ನು ಮುಂದುವರೆಸುತ್ತಾ ಬಂದಿದೆ. ಇದೀಗ ಈ ನಿಯಮದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರಕ್ಕೆ ಬಂದಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಅಂದರೆ 2027 ರ ಐಪಿಎಲ್‌ನಲ್ಲಿ ಈ ನಿಯಮವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಬಿಸಿಸಿಐ 10 ಫ್ರಾಂಚೈಸಿಗಳಿಂದ ಪ್ರತಿಕ್ರಿಯೆ ಕೋರಿದೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ಇಂಪ್ಯಾಕ್ಟ್ ಪ್ಲೇಯರ್ ರೂಲ್ ಪರಿಚಯಿಸಿದಾಗಿನಿಂದ, ಅದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಈ ನಿಯಮವು ತಂಡಗಳು ತಮ್ಮ ತಂತ್ರಗಳನ್ನು ಬದಲಾಯಿಸುವ ಅವಕಾಶವನ್ನು ಹೆಚ್ಚಿಸಿದೆ ಎಂಬುದು ಕೆಲವರ ಅಭಿಪ್ರಾಯವಾಗಿದ್ದರೆ, ಈ ನಿಯಮ ಆಲ್-ರೌಂಡರ್‌ಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಈ ಹಿನ್ನೆಲೆಯಲ್ಲಿ, ಬಿಸಿಸಿಐ ಎಲ್ಲಾ ಐಪಿಎಲ್ ಫ್ರಾಂಚೈಸಿಗಳ ಅಭಿಪ್ರಾಯಗಳನ್ನು ಕೇಳಿದೆ. ಹಾಗೆಯೇ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದುವರಿಸಬೇಕೇ ಅಥವಾ ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಕೇ ಎಂಬುದರ ಕುರಿತು ತಂಡಗಳಿಂದ ಸಲಹೆಗಳನ್ನು ಕೇಳಿದೆ. ಹಾಗೆಯೇ ಬಿಸಿಸಿಐ ಅಂಪೈರಿಂಗ್, ಅಭ್ಯಾಸ ಸೆಷನ್ ಇತ್ಯಾದಿ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಕೋರಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಮುಂಬರುವ ಆವೃತ್ತಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಎಲ್ಲಾ ಫ್ರಾಂಚೈಸಿಗಳಿಗೆ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಮಂಡಳಿಗೆ ವರದಿಯನ್ನು ಸಲ್ಲಿಸಲು ಆಗಸ್ಟ್ 31, 2026 ವರೆಗೆ ಕಾಲಾವಕಾಶ ನೀಡಲಾಗಿದೆ.
ಐಪಿಎಲ್‌ನ ಸಾರ್ವಕಾಲಿಕ ಪ್ಲೇಯಿಂಗ್ 11 ಹೆಸರಿಸಿದ ಆರ್ಸಿಬಿ ನಾಯಕ
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶುಭ್ಮನ್ ಗಿಲ್ ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಆಟಗಾರರು ಈಗಾಗಲೇ ಈ ನಿಯಮವನ್ನು ವಿರೋಧಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ . ಇದರ ಜೊತೆಗೆ ಈ ನಿಯಮದ ಬೆಂಬಲಿಗರೂ ಇದ್ದಾರೆ. ಕಳೆದ ಆವೃತ್ತಿಯ ನಂತರ ಈ ಸಮಸ್ಯೆ ಶಾಂತವಾದಂತೆ ಕಂಡುಬಂದರೂ, ಬಿಸಿಸಿಐನ ಹಠಾತ್ ಉತ್ತರಗಳ ಬೇಡಿಕೆಯು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ ಆವೃತ್ತಿಗೆ ಈ ನಿಯಮವನ್ನು ಪರಿಶೀಲಿಸಲಾಗುತ್ತದೆಯೇ ಅಥವಾ ಅದನ್ನು ಜಾರಿಗೆ ತರಲಾಗುತ್ತದೆಯೇ ಎಂಬುದು ಇನ್ನೂ ಬಗೆಹರಿಯದ ಪ್ರಶ್ನೆಗಳಾಗಿವೆ.