ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಚೇತನ್ ಶರ್ಮಾ ಮರು ಆಯ್ಕೆ; ಕನ್ನಡಿಗ ವೆಂಕಟೇಶ್ ಪ್ರಸಾದ್​ಗಿಲ್ಲ ಮನ್ನಣೆ

| Updated By: ಪೃಥ್ವಿಶಂಕರ

Updated on: Jan 07, 2023 | 5:35 PM

BCCI Selection Committee: ಹೊಸ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆದಿರುವ 5 ಸದಸ್ಯರ ಹೆಸರನ್ನು ಪ್ರಕಟಿಸಿರುವ ಬಿಸಿಸಿಐ ಇದರಲ್ಲಿ ನಾಲ್ವರು ಹೊಸಬರಿಗೆ ಅವಕಾಶ ನೀಡಿದರೆ, ಮುಖ್ಯ ಆಯ್ಕೆದಾರನ ಸ್ಥಾನಕ್ಕೆ ಈ ಹಿಂದೆ ಇದೇ ಹುದ್ದೆಯಲ್ಲಿದ್ದ ಚೇತನ್ ಶರ್ಮಾ ಅವರನ್ನು ಮರು ಆಯ್ಕೆ ಮಾಡಿದೆ.

ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಚೇತನ್ ಶರ್ಮಾ ಮರು ಆಯ್ಕೆ; ಕನ್ನಡಿಗ ವೆಂಕಟೇಶ್ ಪ್ರಸಾದ್​ಗಿಲ್ಲ ಮನ್ನಣೆ
ಚೇತನ್ ಶರ್ಮಾ
Follow us on

ಟಿ20 ವಿಶ್ವಕಪ್​ನಲ್ಲಿ (T20 World Cup) ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ಬಳಿಕ ಇಡೀ ಆಯ್ಕೆ ಮಂಡಳಿಯನ್ನೇ ವಿಸರ್ಜನೆ ಮಾಡಿದ್ದ ಬಿಸಿಸಿಐ (BCCI) ಬರೋಬ್ಬರಿ 50 ದಿನಗಳ ಬಳಿಕ ಕೊನೆಗೂ ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದೆ. ಹೊಸ ಆಯ್ಕೆ ಸಮಿತಿಯಲ್ಲಿ (new selection committee) ಸ್ಥಾನ ಪಡೆದಿರುವ 5 ಸದಸ್ಯರ ಹೆಸರನ್ನು ಪ್ರಕಟಿಸಿರುವ ಬಿಸಿಸಿಐ, ಇದರಲ್ಲಿ ನಾಲ್ವರು ಹೊಸಬರಿಗೆ ಅವಕಾಶ ನೀಡಿದರೆ, ಮುಖ್ಯ ಆಯ್ಕೆದಾರನ ಸ್ಥಾನಕ್ಕೆ ಈ ಹಿಂದೆ ಇದೇ ಹುದ್ದೆಯಲ್ಲಿದ್ದ ಚೇತನ್ ಶರ್ಮಾ ಅವರನ್ನು ಮರು ಆಯ್ಕೆ ಮಾಡಿದೆ. ಇದೇ ಚೇತನ್ ಶರ್ಮಾ (Chetan Sharma) ನೇತೃತ್ವದ ಹಿಂದಿನ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿಯೇ ಬಿಸಿಸಿಐ ಹೊಸ ಆಯ್ಕೆ ಸಮಿತಿಯ ರಚನೆಗೆ ಮುಂದಾಗಿತ್ತು. ಈಗ ಮತ್ತೊಮ್ಮೆ ಚೇತನ್ ಶರ್ಮಾ ಅವರನ್ನು ಮುಖ್ಯ ಆಯ್ಕೆಗಾರರನ್ನಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರಕ್ಕೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನೂತನ ಆಯ್ಕೆ ಸಮಿತಿಯ ಘೋಷಣೆಯ ಕುರಿತು ಬಿಸಿಸಿಐ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಹೊಸ ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮಾ ಮಾತ್ರ ಹಳೆಯ ಮುಖವಾಗಿದ್ದು, ಉಳಿದ ನಾಲ್ವರು ಮೊದಲ ಬಾರಿಗೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಲಿದ್ದಾರೆ. ಇದರಲ್ಲಿ ಮಾಜಿ ಟೆಸ್ಟ್ ಕ್ರಿಕೆಟಿಗರಾದ ಸಲೀಲ್ ಅಂಕೋಲಾ, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ ಮತ್ತು ಶ್ರೀಧರನ್ ಶರತ್ ಸ್ಥಾನ ಪಡೆದಿದ್ದಾರೆ.

ಅಶೋಕ್ ಮಲ್ಹೋತ್ರಾ, ಸುಲಕ್ಷಣ ನಾಯಕ್ ಮತ್ತು ಜತಿನ್ ಪರಾಂಜ್ಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು 600 ಕ್ಕೂ ಹೆಚ್ಚು ಅರ್ಜಿಗಳ ಪೈಕಿ 11 ಸ್ಪರ್ಧಿಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಆಯ್ಕೆಯಾದ ಈ 11 ಸ್ಪರ್ಧಿಗಳೊಂದಿಗೆ ಸಂದರ್ಶನ ನಡೆಸಿದ ಬಳಿಕ ಅಂತಿಮವಾಗಿ ಸಮಿತಿಯು ಈ 5 ಹೆಸರನ್ನು ಶಿಫಾರಸು ಮಾಡಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ವೆಂಕಟೇಶ್​ ಪ್ರಸಾದ್ ಅರ್ಜಿ ತಿರಸ್ಕೃತ

ಇನ್ನು ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾಗೊಳಿದ ಬಳಿಕ ಹೊಸ ಆಯ್ಕೆ ಸಮಿತಿಗಾಗಿ ಅರ್ಜಿ ಆಹ್ವಾನ ಮಾಡಿತ್ತು. ಈ ಸಮಿತಿಯಲ್ಲಿ ಕೆಲಸ ಮಾಡುವ ಸಲುವಾಗಿ 600 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದರಲ್ಲಿ ದಕ್ಷಿಣ ವಲಯದಿಂದ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಟೀಂ ಇಂಡಿಯಾದಲ್ಲಿ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದ ವೆಂಕಟೇಶ್ ಪ್ರಸಾದ್ ಈ ಸ್ಥಾನಕ್ಕೆ ಅರ್ಜಿ ಹಾಕಿದವರಿಗಿಂತ ಒಂದು ಹಂತ ಮುಂದಿದ್ದರು. ಹೀಗಾಗಿ ಪ್ರಸಾದ್ ಅವರಿಗೆ ಮುಖ್ಯ ಆಯ್ಕೆಗಾರ ಹುದ್ದೆ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ವೆಂಕಟೇಶ್ ಪ್ರಸಾದ್ ಅನುಭವಕ್ಕೆ ಸೊಪ್ಪು ಹಾಕದ ಬಿಸಿಸಿಐ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿಲ್ಲ. ಇವರಿಗೂ ಮುನ್ನ ಟೀಂ ಇಂಡಿಯಾದ ಮಾಜಿ ವೇಗಿ ಅಜಿತ್​ ಅಗರ್ಕರ್ ಕೂಡ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಮುಖ್ಯ ಆಯ್ಕೆಗಾರನಾಗಲು ಬೇಕಾದ ಅರ್ಹತೆಗಳು

  1. ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾದ ಯಾವುದೇ ಆಟಗಾರ ಈ ಹುದ್ದೆಗೆ ಅರ್ಜಿ ಹಾಕಬಹುದು.
  2. 30 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿರಬೇಕು.
  3. 10 ಏಕದಿನ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರಬೇಕು.
  4. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಐದು ವರ್ಷಗಳ ಹಿಂದೆ ನಿವೃತ್ತರಾಗಿರಬೇಕು.
  5. ಬಿಸಿಸಿಐನ ಯಾವುದೇ ಸಮಿತಿಯ ಸದಸ್ಯರಾಗಿರಬಾರದು ಮತ್ತು ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಸಿದ್ಧರಿರಬೇಕು.

ಆಯ್ಕೆ ಮಂಡಳಿಯ ಜವಾಬ್ದಾರಿಗಳು

  1. 1. ನ್ಯಾಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿ ಸಾಧ್ಯವಾದಷ್ಟು ಉತ್ತಮ ತಂಡವನ್ನು ಆಯ್ಕೆ ಮಾಡಬೇಕು.
  2. 2. ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕೆ ಬಲವಾದ ಬೆಂಚ್ ಬಲವನ್ನು ಯೋಜಿಸಿ ಮತ್ತು ಸಿದ್ಧಪಡಿಸಬೇಕು.
  3. 3. ಅಗತ್ಯವಿದ್ದಾಗ ತಂಡದ ಸಭೆಗಳಿಗೆ ಹಾಜರಾಗಬೇಕು.
  4. 4. ದೇಶೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಲು ತಂಡದೊಂದಿಗೆ ಪ್ರಯಾಣ ಬೆಳೆಸಬೇಕು.
  5. 5. ಆಯಾ ತಂಡದ ಪ್ರದರ್ಶನಗಳ ಮೌಲ್ಯಮಾಪನ ವರದಿಗಳನ್ನು ತಯಾರಿಸಿ ಆಗಾಗ್ಗೆ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್‌ಗೆ ವರದಿ ನೀಡಬೇಕು.
  6. 6. ಬಿಸಿಸಿಐ ಸೂಚನೆಯಂತೆ ತಂಡದ ಆಯ್ಕೆಯ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಹೇಳಿಕೆ ನೀಡಬೇಕು.
  7. 7. ಪ್ರತಿ ಸ್ವರೂಪದಲ್ಲಿ ತಂಡಕ್ಕೆ ನಾಯಕನನ್ನು ನೇಮಿಸಬೇಕು.
  8. 8. ಬಿಸಿಸಿಐನ ನಿಯಮಗಳು ಮತ್ತು ನಿಯಂತ್ರಣಕ್ಕೆ ಬದ್ಧರಾಗಿರಬೇಕು.

Published On - 5:00 pm, Sat, 7 January 23