WPL 2025: ಯುಪಿ ವಾರಿಯರ್ಸ್ ತಂಡದಿಂದ ಹೊರಗುಳಿದ ಅಲಿಸ್ಸಾ ಹೀಲಿ
Women’s Premier League (WPL 2025): ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ದ್ವಿತೀಯ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೂರನೇ ಸೀಸನ್ಗಾಗಿ ವೇದಿಕೆ ಸಿದ್ಧವಾಗಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಯುಪಿ ವಾರಿಯರ್ಸ್ ತಂಡದಿಂದ ಅಲಿಸ್ಸಾ ಹೀಲಿ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾ ಮತ್ತು ಯುಪಿ ವಾರಿಯರ್ಸ್ ತಂಡಗಳ ನಾಯಕಿ ಅಲಿಸ್ಸಾ ಹೀಲಿ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. ಬಲ ಪಾದದ ನೋವಿನಿಂದ ಬಳಲುತ್ತಿರುವ ಅಲಿಸ್ಸಾ ಹೀಲಿ WPL 2025 ರಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಹೀಗಾಗಿ ಈ ಬಾರಿ ಯುಪಿ ವಾರಿಯರ್ಸ್ ತಂಡವನ್ನು ಹೊಸ ನಾಯಕಿ ಮುನ್ನಡೆಸಲಿದ್ದಾರೆ.
ಅಲಿಸ್ಸಾ ಹೀಲಿ ಅವರು ಇಂಗ್ಲೆಂಡ್ ವಿರುದ್ಧದ ಮಹಿಳಾ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ನಾಯಕತ್ವ ವಹಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಕೊನೆಯ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಇದೀಗ ಅವರ ಫಿಟ್ನೆಸ್ ಸಮಸ್ಯೆಯು ಬಿಗಡಾಯಿಸಿದೆ.
ಬಲ ಪಾದದ ಒತ್ತಡದ ನೋವಿನಿಂದ ಬಳಲುತ್ತಿರುವ ಅಲಿಸ್ಸಾ ಹೀಲಿ ಅವರಿಗೆ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಮುಂಬರುವ ವುಮೆನ್ಸ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಅದರಂತೆ ಬಾರಿಯ WPL ನಲ್ಲಿ ಅಲಿಸ್ಸಾ ಹೀಲಿ ಕಾಣಿಸಿಕೊಳ್ಳುವುದಿಲ್ಲ.
ಯುಪಿ ವಾರಿಯರ್ಸ್ ತಂಡ: ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ರಾಜೇಶ್ವರಿ ಗಾಯಕ್ವಾಡ್, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್, ತಹ್ಲಿಯಾ ಮೆಕ್‌ಗ್ರಾತ್, ವೃಂದಾ ದಿನೇಶ್, ಸೈಮಾ ಠಾಕೋರ್, ಪೂನಮ್ ಉತ್ಥುಲ್ತ್, ಪೂನಂ ಖೆರ್ಮಾತಾ ಚೆಟ್ರಿ, ಅರುಷಿ ಗೋಯೆಲ್, ಕ್ರಾಂತಿ ಗೌಡ್, ಅಲನಾ ಕಿಂಗ್.
ವುಮೆನ್ಸ್ ಪ್ರೀಮಿಯರ್ ಲೀಗ್ ಯಾವಾಗ ಶುರು?
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಫೆಬ್ರವರಿ 19 ರಿಂದ ಶುರುವಾಗಲಿದೆ. ವಡೋದರಾದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಪವರ್ಗೆ ವಿರಾಟ್ ಕೊಹ್ಲಿಯ ದಾಖಲೆ ಉಡೀಸ್
ಇನ್ನು ಫೆಬ್ರವರಿ 15 ರಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಲಿದೆ. ಹಾಗೆಯೇ ಫೆಬ್ರವರಿ 16 ರಂದು ನಡೆಯಲಿರುವ ಮ್ಯಾಚ್ನಲ್ಲಿ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಾಗೆಯೇ ಈ ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 15 ರಂದು ಮುಂಬೈನಲ್ಲಿ ಜರುಗಲಿದೆ.