ಏಕಾಂಗಿಯಾಗಿ ನದಿ ಸ್ವಚ್ಛಗೊಳಿದ ಸುರೇಂದ್ರ ಸಿಂಗ್​ ಮಹತ್ಕಾರ್ಯಕ್ಕೆ ಪೀಟರ್ಸನ್ ಮೆಚ್ಚುಗೆ

ಮಧ್ಯಪ್ರದೇಶದ 20 ವರ್ಷದ ಸುರೇಂದ್ರ ಸಿಂಗ್ ಚೌಧರಿ, ಏಕಾಂಗಿಯಾಗಿ ಅಜ್ನರ್ ನದಿಯನ್ನು ಸ್ವಚ್ಛಗೊಳಿಸಿ ದೇಶವಿದೇಶಗಳಿಂದ ಪ್ರಶಂಸೆ ಗಳಿಸಿದ್ದಾರೆ. ತಿಂಗಳುಗಳ ಕಠಿಣ ಪರಿಶ್ರಮದಿಂದ ನದಿಯನ್ನು ರೂಪಾಂತರಗೊಳಿಸಿದ ಅವರ ಪ್ರಯತ್ನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇವಿನ್ ಪೀಟರ್ಸನ್ ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕಾರ್ಯವು ಅಂತರರಾಷ್ಟ್ರೀಯ ಮನ್ನಣೆಗೆ ಅರ್ಹವಾಗಿದೆ. ಸವಾಲುಗಳನ್ನು ಎದುರಿಸಿ ಸುರೇಂದ್ರ ಸಿಂಗ್ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಏಕಾಂಗಿಯಾಗಿ ನದಿ ಸ್ವಚ್ಛಗೊಳಿದ ಸುರೇಂದ್ರ ಸಿಂಗ್​ ಮಹತ್ಕಾರ್ಯಕ್ಕೆ ಪೀಟರ್ಸನ್ ಮೆಚ್ಚುಗೆ
ಬಿಟ್ಟು ತಬಾಹಿ, ಕೇವಿನ್ ಪೀಟರ್ಸನ್

Updated on: Sep 04, 2026 | 9:26 PM

ಮಧ್ಯಪ್ರದೇಶದ 20 ವರ್ಷದ ಯುವಕನೊಬ್ಬ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ಪಡೆಯುತ್ತಿದ್ದಾನೆ. ಆತ ಮಾಡಿದ ಸಾಮಾಜಿಕ ಕಳಕಳಿಯುಳ್ಳ ಮಹತ್ಕಾರ್ಯಕ್ಕೆ ದೇಶ ವಿದೇಶಗಳಿಂದಲೂ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಬಿಯೋರಾದ ನಿವಾಸಿಯಾಗಿರುವ ಸುರೇಂದ್ರ ಸಿಂಗ್ ಚೌಧರಿ ಎಂಬ ಹೆಸರಿನ 20 ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಏಕಾಂಗಿಯಾಗಿ ಕಸ ತುಂಬಿದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸಿದ್ದಾನೆ. ತಾನು ನದಿಯನ್ನು ಸ್ವಚ್ಛಗೊಳಿಸುವುದಕ್ಕು ಮುನ್ನ ನದಿ ಹೇಗಿತ್ತು, ಸ್ವಚ್ಛಗೊಳಿಸಿದ ಬಳಿಕ ನದಿ ಹೇಗೆ ಕಾಣುತ್ತಿದೆ ಎಂಬ ಫೋಟೋ ಮತ್ತು ನದಿಯನ್ನು ಏಕಾಂಗಿಯಾಗಿ ಸ್ವಚ್ಛಗೊಳಿಸುತ್ತಿರುವ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ದೇಶ, ವಿದೇಶಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ವೀಕ್ಷಿಸಿರುವ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಿನ್ ಪೀಟರ್ಸನ್ ಮೆಚ್ಚುಗೆ

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುರೇಂದ್ರ ಸಿಂಗ್ ಚೌಧರಿ ಮಾಡಿರುವ ಸತ್ಕಾರ್ಯದ ಫೋಟೋವನ್ನು ಹಂಚಿಕೊಂಡಿರುವ ಕೇವಿನ್ ಪೀಟರ್ಸನ್, ಸುರೇಂದ್ರ ಸಿಂಗ್ ಚೌಧರಿ ನದಿ ಸುಚಿಗೊಳಿಸಲು ಎದುರಿಸಿದ ಸವಾಲುಗಳನ್ನು ವಿಸ್ತೃತವಾಗಿ ಬರೆದುಕೊಂಡಿದ್ದಾರೆ. ಹಾಗೆಯೇ ಸುರೇಂದ್ರ ಸಿಂಗ್ ಚೌಧರಿ ಅವರ ಈ ಕೆಲಸ ಅಂತರರಾಷ್ಟ್ರೀಯ ಮನ್ನಣೆಗೆ ಅರ್ಹವಾಗಿದೆ ಎಂತಲೂ ಬರೆದುಕೊಂಡಿದ್ದಾರೆ.

ನದಿಯನ್ನು ಸ್ವಚ್ಛಗೊಳಿಸಿದ ಸುರೇಂದ್ರ ಸಿಂಗ್

ಸೋಶಿಯಲ್ ಮೀಡಿಯಾದಲ್ಲಿ ‘ಬಿಟ್ಟು ತಬಾಹಿ’ ಎಂತಲೇ ಪ್ರಸಿದ್ಧರಾಗಿರುವ ಸುರೇಂದ್ರ ಸಿಂಗ್ ಚೌಧರಿ ನದಿಯನ್ನು ಸ್ವಚ್ಛಗೊಳಿಸಿರುವ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ವಿಡಿಯೋವನ್ನು ವೀಕ್ಷಿಸಿದವರು ಇದು ಎಐ ರಚಿತ ವಿಡಿಯೋವೆನ್ನಲು ಶುರು ಮಾಡಿದ್ದರು. ಆದರೆ ಈ ಆರೋಪಕ್ಕೆ ತಿರುಗೇಟು ನೀಡಿದ ಸುರೇಂದ್ರ ಸಿಂಗ್ ನದಿಯನ್ನು ಸ್ವಚ್ಛಗೊಳಿಸುವ ದೈನಂದಿನ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಇದು ಎಐ ವಿಡಿಯೋ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಂಪೂರ್ಣವಾಗಿ ಬದಲಾದ ನದಿ

ಪ್ಲಾಸ್ಟಿಕ್, ಕಸ ಮತ್ತು ಕೊಳಕಿನ ರಾಶಿಯಿಂದ ಆವೃತವಾಗಿದ್ದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಸುರೇಂದ್ರ ಸಿಂಗ್ 2026 ರ ಜನವರಿಯಿಂದ ಪ್ರಾರಂಭಿಸಿದರು. ತಿಂಗಳುಗಳ ಕಠಿಣ ಪರಿಶ್ರಮದ ನಂತರ, ನದಿ ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ನೀರು ಹೆಚ್ಚು ಸ್ವಚ್ಛವಾಗಿ ಕಾಣುತ್ತಿದೆ. ಇದರಲ್ಲೂ ಕೊಂಕು ಹುಡುಕಿರುವ ಕೆಲವರು ಸುರೇಂದ್ರ ಸಿಂಗ್ ಕೇವಲ ಲೈಕ್ ಮತ್ತು ಕಾಮೆಂಟ್ಸ್ ಹಾಗೂ ಫಾಲೋವರ್ಸ್​ಗಳನ್ನು ಹೆಚ್ಚಿಸಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ ಎಂದು ಜರಿದರು.

ನನಗೆ ಸೋಂಕು ತಗುಲಿತು

ಇದಕ್ಕೆ ತಿರುಗೇಟು ನೀಡಿರುವ ಸುರೇಂದ್ರ ಸಿಂಗ್, ‘ನದಿಯನ್ನು ಸ್ವಚ್ಛಗೊಳಿಸಲು ನಾನು ಯಂತ್ರವನ್ನು ನಿರ್ಮಿಸಬೇಕೆಂದು ಬಯಸಿದ್ದೆ, ಆದರೆ ನನ್ನ ಬಳಿ ಹಣವಿರಲಿಲ್ಲ. ನಾನು ವಿದ್ಯಾರ್ಥಿ. ಆದ್ದರಿಂದ ನಾನು ಅದನ್ನು ನನ್ನ ಕೈಗಳಿಂದ ಸಾಧ್ಯವಾದಷ್ಟು ಸ್ವಚ್ಛಗೊಳಿಸಲು ನಿರ್ಧರಿಸಿದೆ. ಈ ಸಮಯದಲ್ಲಿ, ನನಗೆ ಸೋಂಕು ತಗುಲಿತು, ನನ್ನ ಕೈ ಮತ್ತು ಕಾಲುಗಳ ಚರ್ಮವು ಸಿಪ್ಪೆ ಸುಲಿಯಲು ಪ್ರಾರಂಭಿಸಿತು. ಆದಾರೂ ನಾನು ಧೃಡಸಂಕಲ್ಪ ಮಾಡಿ ನದಿಯನ್ನು ಸುಚಿಗೊಳಿಸುವ ಕೆಲಸವನ್ನು ಮುಂದುವರೆಸಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Fri, 4 September 26

Loading...
Unable to load recommendations.
Follow Us