ಬಸ್ ಡ್ರೈವರ್ ನೀಡಿದ ಸಲಹೆಯಂತೆ ಬೌಲ್ ಮಾಡಿ ಕೊಹ್ಲಿ ವಿಕೆಟ್ ಪಡೆದ ಹಿಮಾಂಶು
Virat Kohli's Dismissal: ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ಹಿಮಾಂಶು ಸಾಂಗ್ವಾನ್, ಈ ವಿಕೆಟ್ ಪಡೆಯುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಬಸ್ ಚಾಲಕನಿಂದ ಪಡೆದ ಸಲಹೆಯೇ ಕೊಹ್ಲಿಯನ್ನು ಔಟ್ ಮಾಡಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

ಹಿಮಾಂಶು ಸಾಂಗ್ವಾನ್…. ಕೆಲವು ದಿನಗಳ ಹಿಂದೆ ಈ ಹೆಸರನ್ನು ಹೇಳಿದರೆ ಭಾಗಶಃ ಎಲ್ಲರೂ ಯಾರವನು ಎಂದು ಕೇಳುತ್ತಿದ್ದರು. ಆದರೆ ಜನವರಿ 31 ರಂದು ನಡೆದ ರಣಜಿ ಪಂದ್ಯದಲ್ಲಿ ಕ್ರಿಕೆಟ್ ಲೋಕದ ಸಾಮ್ರಾಟ ವಿರಾಟ್ ಕೊಹ್ಲಿಯನ್ನ ಕ್ಲೀನ್ ಬೌಲ್ಡ್ ಮಾಡಿದ ನಂತರ ಭಾರತ ಕ್ರಿಕೆಟ್ನಲ್ಲಿ ಹಿಮಾಂಶು ಸಾಂಗ್ವಾನ್ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸ್ವತಃ ಕೊಹ್ಲಿ ಕೂಡ ಹಿಮಾಂಶು ಸಾಂಗ್ವಾನ್ರನ್ನು ಹೊಗಳಿ ಸ್ಮರಣೀಯ ಉಡುಗೊರೆಯನ್ನು ನೀಡಿದ್ದಾರೆ. ಇದೀಗ ಪಂದ್ಯವೆಲ್ಲ ಮುಗಿದ ಬಳಿಕ ಮಾತನಾಡಿರುವ ಹಿಮಾಂಶು ಸಾಂಗ್ವಾನ್, ಕೊಹ್ಲಿಯ ವಿಕೆಟ್ ಉರುಳಿಸುವುದರ ಹಿಂದೆ ಇದ್ದ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ವಾಸ್ತವವಾಗಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ವಿರಾಟ್ ಕೊಹ್ಲಿ ಇಡೀ ಸರಣಿಯಲ್ಲಿ ರನ್ ಬರ ಎದುರಿಸಿದ್ದರು. ಇದರ ಫಲವಾಗಿ ಟೀಂ ಇಂಡಿಯಾ ಹೀನಾಯವಾಗಿ ಸರಣಿ ಸೋತಿತ್ತು. ಈ ಮುಜುಗರದ ಸೋಲಿನಿಂದ ಎಚ್ಚೆತ್ತುಕೊಂಡಿದ್ದ ಬಿಸಿಸಿಐ, ಎಲ್ಲಾ ಆಟಗಾರರು ದೇಶೀ ಟೂರ್ನಿಯನ್ನು ಆಡಲೇಬೇಕೆಂಬ ಷರತ್ತು ವಿಧಿಸಿತ್ತು. ಆ ಪ್ರಕಾರ ಬರೋಬ್ಬರಿ 12 ವರ್ಷಗಳ ನಂತರ ವಿರಾಟ್ ಕೊಹ್ಲಿ ರಣಜಿ ಪಂದ್ಯವನ್ನಾಡಲು ನಿರ್ಧರಿಸಿದ್ದರು. ಅದರಂತೆ ಕಳೆದ ಜನವರಿ 30 ರಂದು ನಡೆದಿದ್ದ ದೆಹಲಿ ಹಾಗೂ ರೈಲ್ವೇಸ್ ತಂಡದ ನಡುವಿನ ರಣಜಿ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ವಿರಾಟ್ಗೆ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಅದರಲ್ಲಿಯೂ ಕೊಹ್ಲಿ ಕೇವಲ 15 ಎಸೆತಗಳನ್ನು ಎದುರಿಸಿ 6 ರನ್ ಗಳಿಸಲಷ್ಟೇ ಶಕ್ತರಾದರು. ರೈಲ್ವೇಸ್ ತಂಡದ ಪ್ರಮುಖ ವೇಗದ ಬೌಲರ್ ಸಾಂಗ್ವಾನ್, ಕಿಂಗ್ ಕೊಹ್ಲಿಯನ್ನು ಇನ್ಸ್ವಿಂಗ್ ಬಾಲ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದರು.
ಬಸ್ ಚಾಲಕ ನೀಡಿದ ಸಲಹೆ
ತನ್ನ ಆಟದ ಮೂಲಕ ಕ್ರಿಕೆಟ್ ಲೋಕದಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ನಿರ್ಮಿಸಿರುವ ವಿರಾಟ್ ಕೊಹ್ಲಿಯ ವಿಕೆಟ್ ಉರುಳಿಸುವುದು ಸುಲಭದ ಮಾತಲ್ಲ. ಅಂತಹದರಲ್ಲಿ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನಾಡದ ಹಿಮಾಂಶು ಸಾಂಗ್ವಾನ್, ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದೀಗ ಪಂದ್ಯ ಮುಗಿದ ವಾರದ ಬಳಿಕ ಕೊಹ್ಲಿಯ ವಿಕೆಟ್ ಉರುಳಿಸುವುದರ ಹಿಂದೆ ಇದ್ದ ತಂತ್ರವೇನು ಎಂಬುದನ್ನು ಸಂಗ್ವಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದು ಖಚಿತವಾದಾಗ ಹಿಮಾಂಶು ಮಾತ್ರ ವಿರಾಟ್ ವಿಕೆಟ್ ಪಡೆಯುತ್ತಾರೆ ಎಂದು ಎಲ್ಲರೂ ಹೇಳುತ್ತಿದ್ದರು ಎಂದು ಆಂಗ್ಲ ಪತ್ರಿಕೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸಾಂಗ್ವಾನ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ನಾವು ಹೋಗುತ್ತಿದ್ದ ಬಸ್ಸಿನ ಡ್ರೈವರ್ ನಾಲ್ಕನೇ ಅಥವಾ ಐದನೇ ಸ್ಟಂಪ್ ಲೈನ್ನಲ್ಲಿ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿ, ನೀವು ಹಾಗೆ ಬೌಲ್ ಮಾಡಿದರೆ, ಕೊಹ್ಲಿ ಖಂಡಿತವಾಗಿಯೂ ಔಟಾಗುತ್ತಾರೆ ಎಂಬ ಸಲಹೆ ನೀಡಿದ್ದರು ಎಂದು ಸಾಂಗ್ವಾನ್ ಹೇಳಿಕೊಂಡಿದ್ದಾರೆ.
ವರ್ಷಗಳಿಂದ ಕೊಹ್ಲಿಯನ್ನು ಕಾಡುತ್ತಿದೆ ಆ ನ್ಯೂನತೆ
ವಾಸ್ತವವಾಗಿ ಆ ಬಸ್ಸಿನ ಡ್ರೈವರ್ ಹೇಳುವುದಕ್ಕೂ ಮುಂಚೆಯೇ ಹಿಮಾಂಶು ಸಾಂಗ್ವಾನ್ಗೆ ಕೊಹ್ಲಿಯ ನ್ಯೂನತೆಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಏಕೆಂದರೆ ಕೊಹ್ಲಿ ಆ ರೀತಿಯ ಎಸೆತಗಳಲ್ಲಿ ಔಟಾಗಿರುವುದು ಒಂದೆರಡು ಸಲ ಅಲ್ಲ. ಇತ್ತೀಚೆಗೆ ಕೊಹ್ಲಿ ಭಾಗಶಃ ಔಟಾಗಿರುವುದು ಅದೇ ಎಸೆತಗಳಿಂದ. ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಕೊಹ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಪ್ರತಿ ಬಾರಿಯೂ ಆಫ್ ಸ್ಟಂಪ್ ಹೊರಗೆ ಹೋಗುವ ಚೆಂಡನ್ನು ಆಡಲು ಪ್ರಯತ್ನಿಸಿ ವಿಕೆಟ್ ಕೀಪರ್ ಅಥವಾ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಕೊಹ್ಲಿಯ ನ್ಯೂನತೆ ಏನು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೆ ಖಚಿತವಾಗಿ ತಿಳಿದಿದೆ. ಅದರಂತೆ ಹಿಮಾಂಶು ಕೂಡ ಆಫ್ ಸ್ಟಂಪ್ ಹೊರಗೆ ಬೌಲ್ ಮಾಡಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
