MS Dhoni: ಧೋನಿಯ ಪ್ರಕಾರ ಈ ವರ್ಷ ಐಪಿಎಲ್ ಪ್ರಶಸ್ತಿ ಗೆಲ್ಲಲು ಅರ್ಹವಾದ ತಂಡ ಸಿಎಸ್ಕೆ ಅಲ್ಲವಂತೆ: ಮತ್ಯಾವುದು?
CSK vs KKR, IPL 2021 Final: ಐಪಿಎಲ್ 2021ರ ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಜಯ ಸಾಧಿಸಿದ ಬಳಿಕ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs KKR) 27 ರನ್ ಅಂತರದ ರೋಚಕ ಗೆಲುವು ದಾಖಲಿಸುವ ಮೂಲಕ ಟ್ರೋಫಿಗೆ ಮುತ್ತಿಕ್ಕಿದೆ. ಫಾಫ್ ಡುಪ್ಲೆಸಿಸ್ (Faf du Plessis) ಅವರ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯ ಅದ್ಭುತ ಪ್ರದರ್ಶನದ ನೆರವಿನಿಂದ ಸಿಎಸ್ಕೆ (Chennai Super Kings) ತಂಡ ನಾಲ್ಕನೇ ಬಾರಿ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದೆ. 2010, 2011, 2018 ಮತ್ತು 2021 ರಲ್ಲಿ ಎಂ. ಎಸ್ ಧೋನಿ (MS Dhoni) ಪಡೆ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಅತ್ತ ಕೋಲ್ಕತ್ತ ತಂಡದ ಮೂರನೇ ಐಪಿಎಲ್ ಟ್ರೋಫಿ ಕನಸು ಭಗ್ನಗೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ಚೆನ್ನೈ ನಾಯಕ ಧೋನಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ನಾನು ನಮ್ಮ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಮಾತನಾಡುವ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಗ್ಗೆ ಮಾತನಾಡುವುದು ಮುಖ್ಯ. ಯಾಕಂದ್ರೆ ಮೊದಲ ಚರಣದಲ್ಲಿ ಅವರಿದ್ದ ಸ್ಥಾನ ಮತ್ತು ಎರಡನೇ ಚರಣದಲ್ಲಿ ಅವರು ಮಾಡಿದ ಕಮ್ಬ್ಯಾಕ್ಗೆ ತಲೆಬಾಗಲೇಬೇಕು. ಈರೀತಿಯಾಗಿ ಕಮ್ಬ್ಯಾಕ್ ಮಾಡುವುದು ಸುಲಭದ ಮಾತಲ್ಲ. ನನಗನ್ನಿಸುವ ಪ್ರಕಾರ ಈ ವರ್ಷ ಐಪಿಎಲ್ ಪ್ರಶಸ್ತಿ ಗೆಲ್ಲಲು ಅರ್ಹವಾದ ತಂಡ ಎಂದರೆ ಅದು ಕೆಕೆಆರ್. ಮೊದಲ ಚರಣವಾದ ಬಳಿಕ ಇದ್ದ ಬ್ರೇಕ್ ಅವರಿಗೆ ಸಹಾಯವಾಗಿರಬಹುದು” ಎಂದು ಧೋನಿ ಹೇಳಿದ್ದಾರೆ.
ಸಿಎಸ್ಕೆ ಬಗ್ಗೆ ಮಾತನಾಡಿದ ಧೋನಿ, “ನಾವು ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಅವರನ್ನು ವಿಶೇಷವಾಗಿ ಉಪಯೋಗಿಸಿಕೊಂಡೆವು. ಜವಾಬ್ದಾರಿ ತೆಗೆದುಕೊಳ್ಳುವುದು ಮುಖ್ಯ. ಯಾವ ಆಟಗಾರ ಫಾರ್ಮ್ನಲ್ಲಿ ಇರತ್ತಾನೋ ಅವನು ಇತರೆ ಆಟಗಾರರನ್ನೂ ಫಾರ್ಮ್ಗೆ ಕರೆತರಲು ಪ್ರಯತ್ನಿಸುತ್ತಾನೆ. ನಮ್ಮ ತಂಡದಲ್ಲೂ ಇದೇರೀತಿ ಆಯಿತು. ಪ್ರತಿಯೊಂದು ಫೈನಲ್ ಕೂಡ ಸ್ಪೆಷಲ್. ದಾಖಲೆಗಳನ್ನು ನೋಡುವುದಾದರೆ ನಮ್ಮದು ಉತ್ತಮ ತಂಡ ಹೌದು. ಆದರೆ, ನಾವೂ ಫೈನಲ್ನಲ್ಲೊ ಸೋತಿದ್ದೇವೆ. ನಮ್ಮ ಅಭ್ಯಾಸ ಸಮಯ ಮೀಟಿಂಗ್ ಟೈಮ್ ಕೂಡ ಆಗಿತ್ತು” ಎಂದು ಹೇಳಿದರು.
ಇದೇವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿದ ಧೋನಿ, “ಅಭಿಮಾನಿಗಳಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ನಾವೀಗ ದುಬೈನಲ್ಲಿ ಇದ್ದೇವೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಆಡಿದಾಗಲೂ ನಮಗೆ ಅಭಿಮಾನಿಗಳ ಬೆಂಬಲ ಅದ್ಭುತವಾಗಿತ್ತು. ನನಗೆ ಚೆಪಕ್, ಚೆನ್ನೈನಲ್ಲಿ ಆಡಿದ ಅನುಭವ ನೀಡಿತು” ಎಂದು ಧೋನಿ ತಮ್ಮ ಅಭಿಮಾನಿಗಳನ್ನು ನೆನೆದರು.
(Chennai Super Kings skipper MS Dhoni hailed Kolkata Knight Riders for putting up a great show in IPL 2021)