‘ವಿಶ್ವ ಟೆಸ್ಟ್ ಇಲೆವೆನ್’ ಪ್ರಕಟಿಸಿದ ಚೇತೇಶ್ವರ್ ಪೂಜಾರ

ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಮಿಚೆಲ್ ಸ್ಟಾರ್ಕ್‌ಗೆ ತಂಡದಲ್ಲಿ ಜಾಗವಿಲ್ಲ! ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಇಲ್ಲಿದೆ ಕೊಕ್! ಹೌದು, ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಪ್ರಕಟಿಸಿರುವ ಪ್ರಸ್ತುತ ಜಗತ್ತಿನ ಅತ್ಯುತ್ತಮ 'ವಿಶ್ವ ಟೆಸ್ಟ್ XI' ತಂಡ ಈಗ ಕ್ರೀಡಾಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಆಟಗಾರರ ಪ್ರಾಬಲ್ಯವಿರುವ ಈ ತಂಡದಲ್ಲಿ ಸ್ಥಾನ ಪಡೆದಿರುವ ಪ್ಲೇಯರ್ಸ್ ಪಟ್ಟಿ ಇಲ್ಲಿದೆ.

ವಿಶ್ವ ಟೆಸ್ಟ್ ಇಲೆವೆನ್ ಪ್ರಕಟಿಸಿದ ಚೇತೇಶ್ವರ್ ಪೂಜಾರ
'World Test XI
Image Credit source: x.com

Updated on: Aug 23, 2026 | 1:29 PM

ಟೀಮ್ ಇಂಡಿಯಾದ ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಇತ್ತೀಚೆಗೆ ತಮ್ಮ ನೆಚ್ಚಿನ ಪ್ರಸ್ತುತ ಜಗತ್ತಿನ ಅತ್ಯುತ್ತಮ ‘ವಿಶ್ವ ಟೆಸ್ಟ್ ಇಲೆವೆನ್’ (World Test XI) ಪ್ರಕಟಿಸಿದ್ದಾರೆ. ಹನ್ನೊಂದು ಸದಸ್ಯರ ಈ ತಂಡದಲ್ಲಿ ಅವರು ಟೀಮ್ ಇಂಡಿಯಾದ 5 ಮಂದಿಗೆ ಸ್ಥಾನ ನೀಡುವ ಮೂಲಕ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರಾಬಲ್ಯವನ್ನು ಎತ್ತಿ ಹಿಡಿದಿದ್ದಾರೆ. ಆದರೆ, ಆಸ್ಟ್ರೇಲಿಯಾದ ದಿಗ್ಗಜ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಮಿಚೆಲ್ ಸ್ಟಾರ್ಕ್ ಕೈಬಿಡಲು ಕಾರಣವೇನು?

ಆಸ್ಟ್ರೇಲಿಯಾದ ಪ್ರಮುಖ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೈಬಿಟ್ಟಿದ್ದಕ್ಕೆ ಪೂಜಾರ ಸ್ಪಷ್ಟ ಮತ್ತು ತಾರ್ಕಿಕ ಕಾರಣ ನೀಡಿದ್ದಾರೆ. ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಕಳೆದ ಎರಡು ಬಾರ್ಡರ್-ಗಾವಸ್ಕರ್ ಸರಣಿಗಳಲ್ಲಿ, ಭಾರತೀಯ ಬ್ಯಾಟರ್‌ಗಳು ಸ್ಟಾರ್ಕ್ ಬೌಲಿಂಗ್ ಅನ್ನು ಎದುರಿಸಲು ತುಂಬಾ ಆತ್ಮವಿಶ್ವಾಸ ಹೊಂದಿದ್ದರು ಮತ್ತು ಅವರ ವಿರುದ್ಧ ಸುಲಭವಾಗಿ ರನ್ ಗಳಿಸುತ್ತಿದ್ದರು ಎಂದು ಪೂಜಾರ ನೆನಪಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಹೆಚ್ಚು ನಿಖರತೆಯಿಂದ ಬೌಲಿಂಗ್ ಮಾಡುವ ಜೋಶ್ ಹೇಝಲ್​ವುಡ್ ಮತ್ತು ಪ್ಯಾಟ್ ಕಮಿನ್ಸ್ ಅವರಿಗೆ ಆದ್ಯತೆ ನೀಡಿದ್ದಾರೆ.

ಅನುಭವಕ್ಕೆ ಮಣೆ:

ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಫಾರ್ಮ್ ನಡುವೆಯೂ, ಪೂಜಾರ ಅನುಭವಿಗಳಿಗೆ ಮಣೆ ಹಾಕಿದ್ದಾರೆ. ಡಬ್ಲ್ಯುಟಿಸಿ (WTC) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಶತಕ ಸಿಡಿಸಿದ್ದ ಸೌತ್ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಮತ್ತು ಕಳೆದ ಒಂದು ವರ್ಷದಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಾಂತ್ರಿಕವಾಗಿ ಬಲಿಷ್ಠವಾಗಿರುವ ಕೆ.ಎಲ್. ರಾಹುಲ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: 70 ಕೋಟಿ ರೂ. ನಷ್ಟ: ಟೀಮ್ ಇಂಡಿಯಾ ಕಣಕ್ಕಿಳಿದರೆ 500 ಕೋಟಿ ರೂ. ಲಾಭ!

ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ:

ಈ ತಂಡದಲ್ಲಿ ರವೀಂದ್ರ ಜಡೇಜಾ ಮತ್ತು ನಾಥನ್ ಲಿಯಾನ್ ರೂಪದಲ್ಲಿ ಇಬ್ಬರು ಸ್ಪಿನ್ನರ್‌ಗಳಿದ್ದರೂ, ಸೇನಾ (SENA – ಸೌತ್, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ) ದೇಶಗಳ ಪಿಚ್‌ಗಳಲ್ಲಿ ಪಂದ್ಯ ನಡೆದರೆ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಸ್ಪಿನ್ನರ್ ಬದಲಿಗೆ ಹೆಚ್ಚುವರಿ ವೇಗದ ಬೌಲಿಂಗ್ ಆಲ್ ರೌಂಡರ್ ಅನ್ನು ಆಡಿಸುವುದಾಗಿ ಪೂಜಾರ ತಿಳಿಸಿದ್ದಾರೆ. ಅದರಂತೆ ಚೇತೇಶ್ವರ ಪೂಜಾರ ಆಯ್ಕೆ ಮಾಡಿರುವ ವಿಶ್ವ ಟೆಸ್ಟ್ ಇಲೆವೆನ್ ಈ ಕೆಳಗಿನಂತಿದೆ…

  1. ಏಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) – ಆರಂಭಿಕ ಬ್ಯಾಟರ್
  2. ಕೆ.ಎಲ್. ರಾಹುಲ್ (ಭಾರತ) – ಆರಂಭಿಕ ಬ್ಯಾಟರ್
  3. ಜೋ ರೂಟ್ (ಇಂಗ್ಲೆಂಡ್) – ಮಧ್ಯಮ ಕ್ರಮಾಂಕ
  4. ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ) – ಮಧ್ಯಮ ಕ್ರಮಾಂಕ
  5. ಶುಭಮನ್ ಗಿಲ್ (ಭಾರತ) – ಮಧ್ಯಮ ಕ್ರಮಾಂಕ
  6. ರಿಷಭ್ ಪಂತ್ (ಭಾರತ) – ವಿಕೆಟ್ ಕೀಪರ್ ಬ್ಯಾಟರ್
  7. ರವೀಂದ್ರ ಜಡೇಜಾ (ಭಾರತ) – ಆಲ್ ರೌಂಡರ್
  8. ನಾಥನ್ ಲಿಯಾನ್ (ಆಸ್ಟ್ರೇಲಿಯಾ) – ಪ್ರಮುಖ ಸ್ಪಿನ್ನರ್
  9. ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ) – ವೇಗಿ
  10. ಜಸ್ಪ್ರಿತ್ ಬುಮ್ರಾ (ಭಾರತ) – ವೇಗಿ
  11. ಜೋಶ್ ಹೇಝಲ್‌ವುಡ್ (ಆಸ್ಟ್ರೇಲಿಯಾ) – ವೇಗಿ

 

Loading...
Unable to load recommendations.
Follow Us