ಕ್ರಿಕೆಟ್ ಅಂಗಳದಲ್ಲಿ ಸ್ಮಾರ್ಟ್ ಬಾಲ್: ಇನ್ಮುಂದೆ ಇಂಚಿಂಚು ಮಾಹಿತಿ ಸಿಗಲಿದೆ
smart ball in cricket: ಸ್ಮಾರ್ಟ್ ಬಾಲ್ ಸಾಂಪ್ರದಾಯಿಕ ಚೆಂಡಿನಂತೆಯೇ ಇರುತ್ತವೆ. ಅದರ ವಿನ್ಯಾಸ ಕೂಡ ಹಳೆಯ ಮಾದರಿಯಲ್ಲಿರುತ್ತದೆ.
ಹೊಸ ಹೊಸ ತಂತ್ರಜ್ಞಾನದಿಂದಾಗಿ ಕ್ರಿಕೆಟ್ (Cricket) ಬಹಳಷ್ಟು ಬದಲಾಗಿದೆ. ಮೂರನೇ ಅಂಪೈರ್‌ನಿಂದ ಹಿಡಿದು ಕ್ಯಾಮೆರಾದ ಬಳಕೆಯವರೆಗೆ, ಹಾಕ್ ಐ, ಸ್ನಿಕೋ ಮೀಟರ್, ಹಾಟ್ ಸ್ಪಾಟ್, ಸ್ಪೈಡರ್ ಕ್ಯಾಮ್, ಸ್ಪೀಡ್ ಗನ್, ಸ್ಟಂಪ್ ಮೈಕ್‌ನಂತಹ ಎಲ್ಲಾ ತಂತ್ರಗಳನ್ನು ಇದುವರೆಗೆ ಕ್ರೀಡಾ ಪ್ರೇಮಿಗಳು ನೋಡಿದ್ದಾರೆ. ಈಗ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಪ್ರಯೋಗ ನಡೆಯಲಿದ್ದು, ಅದು ತುಂಬಾ ವಿಭಿನ್ನವಾಗಿರುವುದೇ ವಿಶೇಷ. ಹೌದು, ಇದೇ ಮೊದಲ ಬಾರಿಗೆ ಕ್ರಿಕೆಟ್ನಲ್ಲಿ ಸ್ಮಾರ್ಟ್ ಬಾಲ್ಗಳನ್ನು (Smart ball) ಬಳಸಲಾಗುತ್ತಿದೆ. ಆಗಸ್ಟ್ 26 ರಿಂದ ಶುರುವಾಗಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (CPL-2021) ಸ್ಮಾರ್ಟ್ ಬಾಲ್ಗಳ ಪ್ರಯೋಗ ಮಾಡಲಾಗುತ್ತಿದೆ. ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಬಾಲ್ನ್ನು ತಯಾರಿಸಿರುವುದು ಖ್ಯಾತ ಸ್ಪೋಟ್ಸ್ ಕಂಪೆನಿ ಕೂಕಬುರ್ರಾ.
ಸ್ಮಾರ್ಟ್ ಬಾಲ್ ಎಂದರೇನು? ಸರಳವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ ಚಿಪ್ ಹೊಂದಿರುವ ಬಾಲ್ ಅಷ್ಟೇ. ಅಂದರೆ ಈ ಬಾಲ್ಗಳಲ್ಲಿ ವಿಶೇಷ ಚಿಪ್ ಅಳವಡಿಸಲಾಗಿರುತ್ತದೆ. ಇದು ಬಾಲ್ನ ಸ್ಪೀಡ್, ಸ್ಪಿನ್, ಪವರ್ ಸೇರಿದಂತೆ ಎಲ್ಲಾ ರೀತಿ ಮಾಹಿತಿಯನ್ನು ನೈಜ ಸಮಯದಲ್ಲಿ ಸಂಗ್ರಹಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಆ್ಯಪ್ ಮೂಲಕ ಸ್ಮಾರ್ಟ್ ವಾಚ್, ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್/ಲ್ಯಾಪ್ ಟಾಪ್ ನಲ್ಲಿ ಪ್ರತಿಯೊಂದು ಚೆಂಡಿನ ಮಾಹಿತಿಯನ್ನು ವೀಕ್ಷಿಸಬಹುದು. ಅಂದರೆ ವೀಕ್ಷಕರಿಗೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದರೆ ಬಾಲ್ನ ವೇಗದ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸ್ಮಾರ್ಟ್ ಬಾಲ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಪ್ರಯೋಗ ಮಾಡಲಾಗುತ್ತಿದ್ದು, ಪ್ರಯೋಗ ಯಶಸ್ವಿಯಾದರೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಚಿಪ್ ಬಾಲ್ ಕಾಣಿಸಿಕೊಳ್ಳಲಿದೆ.
ಉಳಿದ ಚೆಂಡಿಗಿಂತ ಭಿನ್ನವಾಗಿರುತ್ತದೆಯೇ? ಹಾಗೇನು ಇಲ್ಲ. ಚೆಂಡು ತಯಾರಿಸಿರುವ ಕುಕಬುರ್ರಾ ಕಂಪೆನಿ ಪ್ರಕಾರ, ಸ್ಮಾರ್ಟ್ ಬಾಲ್ ಸಾಂಪ್ರದಾಯಿಕ ಚೆಂಡಿನಂತೆಯೇ ಇರುತ್ತವೆ. ಅದರ ವಿನ್ಯಾಸ ಕೂಡ ಹಳೆಯ ಮಾದರಿಯಲ್ಲಿರುತ್ತದೆ. ಇದರ ಹೊರತಾಗಿ ಚೆಂಡಿನ ಒಳಗೆ ಸ್ಮಾರ್ಟ್ ಚಿಪ್ ಅಳವಡಿಸಲಾಗಿರುತ್ತದೆ. ಅದಾಗ್ಯೂ ಚೆಂಡಿನ ತೂಕ ಹೆಚ್ಚಾಗುವುದಿಲ್ಲ ಎಂದು ತಿಳಿಸಿದೆ.
ಸ್ಮಾರ್ಟ್ ಬಾಲ್ ಯಾವ ಡೇಟಾವನ್ನು ನೀಡುತ್ತದೆ? ಸ್ಮಾರ್ಟ್ ಬಾಲ್ ಚೆಂಡಿನ ವೇಗ, ಸ್ಪಿನ್ ಮತ್ತು ಪವರ್ ಬಗ್ಗೆ ಮಾಹಿತಿ ನೀಡುತ್ತದೆ. ಹಾಗೆಯೇ ಇದರ ಮತ್ತೊಂದು ವಿಶೇಷ ಅಂಶವೆಂದರೆ ಚೆಂಡು ಪುಟಿದೆದ್ದ ಬಳಿಕದ ವೇಗದ ಬಗ್ಗೆ ಕೂಡ ಡೇಟಾವನ್ನು ನೀಡುತ್ತದೆ. ಹಾಗೆಯೇ ಸ್ಮಾರ್ಟ್ ಬಾಲ್‌ನಲ್ಲಿ ಬೌನ್ಸ್ ವೇಗ-ಚೆಂಡು ಬೌನ್ಸ್ ಆಗುವ ಮುನ್ನ ವೇಗ ಮತ್ತು ಚೆಂಡು ಬೌನ್ಸ್ ಆದ ತಕ್ಷಣ ಪಡೆದ ವೇಗವನ್ನು ಪ್ರತ್ಯೇಕವಾಗಿ ಸೂಚಿಸಲಾಗುತ್ತದೆ.
ಮಾಹಿತಿಯನ್ನು ಪಡೆಯುವುದು ಹೇಗೆ? ಸ್ಮಾರ್ಟ್ ಬಾಲ್ ಬಳಸಲಾಗುವ ಪಂದ್ಯಗಳಿಗಾಗಿ ವಿಶೇಷ ಆಪರೇಟರ್ ಆ್ಯಪ್ ಹೊಂದಿದ್ದು, ಅದು ಬೌಲರ್ ಚೆಂಡನ್ನು ಎಸೆಯುವ ಮುನ್ನ ರೆಕಾರ್ಡಿಂಗ್ ಆರಂಭಿಸಲು ಆಜ್ಞೆಯನ್ನು ಕಳುಹಿಸುತ್ತದೆ. ನಂತರ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಇದರ ವಿವರವಾದ ವಿಶ್ಲೇಷಣೆಯನ್ನು ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಸಂಖ್ಯೆಗಳಂತೆ ಪ್ರದರ್ಶಿಸಲಾಗುತ್ತದೆ. ಮೊಬೈಲ್‌ಗಳಿಗೆ ಸಂಬಂಧಿಸಿದಂತೆ, ಚೆಂಡಿನಿಂದ ಮಾಹಿತಿಯನ್ನು ನೇರವಾಗಿ ಬ್ಲೂಟೂತ್ ಮೂಲಕ ಮೊಬೈಲ್‌ಗೆ ಕಳುಹಿಸಲಾಗುತ್ತದೆ ಮತ್ತು ಫಲಿತಾಂಶಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.
ಎಷ್ಟು ವೇಗದ ಪ್ರಕ್ರಿಯೆ? ಚೆಂಡನ್ನು ಎಸೆದ ಸಮಯದಿಂದ ಮಾಹಿತಿ ಪಡೆಯಲು ತೆಗೆದುಕೊಳ್ಳುವ ಸರಾಸರಿ ಸಮಯ ಸುಮಾರು ಐದು ಸೆಕೆಂಡುಗಳು ಮಾತ್ರ. ಹೀಗಾಗಿ ಮ್ಯಾಚ್ ವೀಕ್ಷಿಸುತ್ತಿದ್ದಂತೆ ನಿಮಗೆ ಬಿಗ್ ಸ್ಕ್ರೀನ್ಗಳಲ್ಲಿ ಪ್ರತಿಯೊಂದು ಬಾಲ್ನ ಸಂಪೂರ್ಣ ಮಾಹಿತಿ ದೊರೆಯಲಿದೆ. ಸದ್ಯ ಇದೇ ಮೊದಲ ಬಾರಿ ಸಿಪಿಎಲ್ನಲ್ಲಿ ಸ್ಮಾರ್ಟ್ ಬಾಲ್ನ ಪ್ರಯೋಗ ನಡೆಯುತ್ತಿದ್ದು, ಇದು ಯಶಸ್ವಿಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು
ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(chip smart ball in cricket 1st time to introduce in cpl 2021)