
ಭಾರತ ಹಾಗೂ ಶ್ರೀಲಂಕಾ (India vs Sri Lanka ) ನಡುವಿನ ಮೊದಲ ಟೆಸ್ಟ್ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಶ್ರೀಲಂಕಾದಲ್ಲಿ ಅವಘಡವೊಂದು ಸಂಭವಿಸಿದೆ. ಕುಡಿಯುವ ನೀರಿನ ವಿಚಾರಕ್ಕೆ ಶುರುವಾದ ಜಗಳ ಕ್ರಿಕೆಟ್ ಪಾಠವನ್ನು ಹೇಳಿಕೊಡುವ ಗುರುವಿನ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಈ ಘಟನೆ ಕೊಲಂಬೊದಲ್ಲಿ ನಡೆದಿದ್ದು, ಕ್ರಿಕೆಟ್ ಪಂದ್ಯದ ಸಮಯದಲ್ಲಿ ಇಬ್ಬರು ಕ್ರಿಕೆಟಿಗರ ನಡುವೆ ಕುಡಿಯುವ ನೀರಿನ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದವನ್ನು ತಿಳಿಗೊಳಿಸಲು 62 ವರ್ಷದ ಕೋಚ್ ಸುಮಿತ್ ಫರ್ನಾಂಡೊ ಮಧ್ಯಪ್ರವೇಶಿದ್ದಾರೆ. ಕ್ರಮೇಣ ಜಗಳ ವಿಕೋಪಕ್ಕೆ ತಿರುಗಿ ಜಗಳವಾಡುತ್ತಿದ್ದ ಇಬ್ಬರು ಯುವ ಕ್ರಿಕೆಟಿಗರಲ್ಲಿ ಒಬ್ಬ ಕೋಚ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಕೂಡಲೇ ಕೋಚ್ ಸುಮಿತ್ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಮಿತ್ ಫರ್ನಾಂಡೊ ಸಾವನ್ನಪ್ಪಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 17 ವರ್ಷದ ಶಾಲಾ ಕ್ರಿಕೆಟಿಗನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆಗಸ್ಟ್ 8 ರಂದು ಇಬ್ಬರು ಆಟಗಾರರ ನಡುವೆ ಕುಡಿಯುವ ನೀರಿನ ವಿಚಾರದಲ್ಲಿ ವಾಗ್ವಾದ ನಡೆದು, ಅದು ನಂತರ ಕೈಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ನಡುವಿನ ಈ ಜಗಳವನ್ನು ಬಿಡಿಸಲು ಹೋದ ಕೋಚ್ ಸುಮಿತ್ ಫರ್ನಾಂಡೊ ಮೇಲೆ 17 ವರ್ಷದ ಶಾಲಾ ಕ್ರಿಕೆಟಿಗ ದಾಳಿ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸುಮಿತ್ ಫರ್ನಾಂಡೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆರು. ಪ್ರಕರಣದಲ್ಲಿ ಬಂಧಿಸಲ್ಪಟ್ಟ 17 ವರ್ಷದ ಆಟಗಾರನನ್ನು ಕೊಲಂಬೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಗಸ್ಟ್ 17 ರವರೆಗೆ ಆತನನ್ನು ಬಾಲಾಪರಾಧಿ ಬಂಧನದಲ್ಲಿಡಲು ನ್ಯಾಯಾಲಯ ಆದೇಶಿಸಿದೆ.
ಸಾವಿಗೀಡಾಗಿರುವ ಸುಮಿತ್ ಫರ್ನಾಂಡೊ ಶ್ರೀಲಂಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್ ಅವರ ತರಬೇತುದಾರರಾಗಿದ್ದರು. ಫರ್ನಾಂಡೊ ಶ್ರೀಲಂಕಾದ ಶಾಲಾ ಮತ್ತು ಕ್ಲಬ್ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ಹೆಸರು. ಅವರು ಈ ಹಿಂದೆ ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನಲ್ಲಿ ಕೆಲಸ ಮಾಡಿದ್ದರು, ಅಲ್ಲಿ ಅವರು ಕುಸಲ್ ಮೆಂಡಿಸ್ ಸೇರಿದಂತೆ ಅನೇಕ ಯುವ ಕ್ರಿಕೆಟಿಗರಿಗೆ ತರಬೇತಿ ನೀಡಿದ್ದರು. ಮೆಂಡಿಸ್ ಪ್ರಸ್ತುತ ಶ್ರೀಲಂಕಾದ ಏಕದಿನ ಮತ್ತು ಟಿ 20 ತಂಡಗಳ ನಾಯಕರಾಗಿದ್ದಾರೆ. ಅವರು ಬ್ಲೂಮ್‌ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ ಕ್ಲಬ್‌ನೊಂದಿಗೆ ತರಬೇತುದಾರರಾಗಿ ಮಾತ್ರವಲ್ಲದೆ, ನಂತರ ಕ್ಲಬ್‌ನ ಕ್ಯುರೇಟರ್ ಆಗಿಯೂ ಸೇವೆ ಸಲ್ಲಿಸಿದ್ದರು.
Published On - 4:02 pm, Fri, 14 August 26