Suresh Raina: ಇದೇ ಕಾರಣಕ್ಕೆ ನಾವು ರೈನಾರನ್ನು ಖರೀದಿಸಿಲ್ಲ ಎಂದ CSK ಸಿಇಒ
IPL 2022 CSK: ಇದೇ ವೇಳೆ ಮತ್ತೋರ್ವ ಯಶಸ್ವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರಿಗಾಗಿ ಬಿಡ್ಡಿಂಗ್ ನಡೆಸದ ಬಗ್ಗೆ ಮಾತನಾಡಿದ ಕಾಶಿ ವಿಶ್ವನಾಥನ್, ನಾವು ಫಾಫ್ ಅವರನ್ನು ಕಳೆದುಕೊಂಡಿದ್ದೇವೆ
IPL -2022 ಮೆಗಾ ಹರಾಜಿನಲ್ಲಿ ಅನೇಕ ಫ್ರಾಂಚೈಸಿಗಳು ತಮ್ಮ ಹಳೆಯ ಸಹ ಆಟಗಾರರನ್ನು ಖರೀದಿಸಲಿಲ್ಲ. ಈ ಪಟ್ಟಿಯಲ್ಲಿ ಸುರೇಶ್ ರೈನಾ ಹೆಸರು ಕೂಡ ಮುಂಚೂಣಿಯಲ್ಲಿದೆ. ಆದರೆ ಸಿಎಸ್‌ಕೆ ತಂಡವು ಹಲವು ಹಿರಿಯ ಆಟಗಾರರನ್ನು ಖರೀದಿಸಿದರೂ, ರೈನಾ ಅವರ ಖರೀದಿಗೆ ಯಾವುದೇ ಆಸಕ್ತಿ ತೋರಲಿಲ್ಲ. ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದ ರೈನಾರನ್ನು ಸಿಎಸ್‌ಕೆ ಖರೀದಿಸದಿರುವುದಕ್ಕೆ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದರು. ಇದೀಗ ಸುರೇಶ್ ರೈನಾ ಅವರನ್ನು ಯಾಕಾಗಿ ಕೈಬಿಡಲಾಗಿದೆ ಎಂಬುದಕ್ಕೆ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಸ್ಪಷ್ಟನೆ ನೀಡಿದ್ದಾರೆ.
ರೈನಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಈ ಲೀಗ್‌ನಲ್ಲಿ 205 ಪಂದ್ಯಗಳನ್ನು ಆಡಿರುವ ಅವರು 5528 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ರೈನಾ ಚೆನ್ನೈ ಪರ 4678 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಾಗ್ಯೂ ರೈನಾ ಅವರನ್ನು ಕೈ ಬಿಡಲು ಮುಖ್ಯ ಕಾರಣ ತಂಡದ ಸಂಯೋಜನೆ ಎಂದಿದ್ದಾರೆ ಕಾಶಿ ವಿಶ್ವನಾಥನ್.
ನಾವು ಹರಾಜಿನಲ್ಲಿ ಆಟಗಾರರನ್ನು ಆಯ್ಕೆ ಮಾಡಿದಾಗ ತಂಡದ ಸಂಯೋಜನೆ ಮತ್ತು ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ರೈನಾ ಕಳೆದ 12 ವರ್ಷಗಳಿಂದ ಸಿಎಸ್‌ಕೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ನಿಸ್ಸಂಶಯವಾಗಿ, ನಾವು ರೈನಾ ಅವರನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ನಮಗೆ ಕಷ್ಟಕರವಾಗಿತ್ತು. ಆದರೆ ಅದೇ ಸಮಯದಲ್ಲಿ ತಂಡದ ಸಂಯೋಜನೆಯು ಫಾರ್ಮ್ ಮತ್ತು ಯಾವ ರೀತಿಯ ತಂಡವನ್ನು ಬಯಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಅವರು ತಂಡದಲ್ಲಿ ಸರಿಹೊಂದುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ಸುರೇಶ್ ರೈನಾ ಅವರನ್ನು ಖರೀದಿಸಿಲ್ಲ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಮತ್ತೋರ್ವ ಯಶಸ್ವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರಿಗಾಗಿ ಬಿಡ್ಡಿಂಗ್ ನಡೆಸದ ಬಗ್ಗೆ ಮಾತನಾಡಿದ ಕಾಶಿ ವಿಶ್ವನಾಥನ್, ನಾವು ಫಾಫ್ ಅವರನ್ನು ಕಳೆದುಕೊಂಡಿದ್ದೇವೆ. ಕಳೆದ ದಶಕದಿಂದ ಫಾಫ್ ನಮ್ಮೊಂದಿಗಿದ್ದರು. ಅದು ಹರಾಜಿನ ಪ್ರಕ್ರಿಯೆ ಮತ್ತು ಡೈನಾಮಿಕ್ಸ್. ಕೆಲವೊಮ್ಮೆ ನಾವು ಬಯಸಿದ ಆಟಗಾರರು ನಮ್ಮ ಮೊತ್ತಕ್ಕೆ ಸಿಗಬೇಕೆಂದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ
ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?
ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..!
(Csk ceo Kasi Viswanath reveals why suresh raina is not picked up in ipl mega auction)