ಸಿಎಸ್‌ಕೆ ಪ್ಲೇಯಿಂಗ್ 11 ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ!

ಸಿಎಸ್​ಕೆ ಫ್ರಾಂಚೈಸಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ.  2013ರ ಫಿಕ್ಸಿಂಗ್ ಹಗರಣದಲ್ಲಿ ಸಿಎಸ್‌ಕೆ ಹೆಸರು ಸಿಲುಕಿತ್ತು. ಆಗಿನ ಫ್ರಾಂಚೈಸಿ ಮಾಲೀಕ ಗುರುನಾಥ್ ಮೇಯಪ್ಪನ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ಸಿಎಸ್‌ಕೆ ತಂಡವನ್ನು 2016 ಮತ್ತು 2017ರ ಐಪಿಎಲ್ ಸೀಸನ್‌ಗಳಿಂದ ಎರಡು ವರ್ಷಗಳ ಕಾಲ ಸಂಪೂರ್ಣವಾಗಿ ನಿಷೇಧಿಸಿತ್ತು. ಇದೀಗ ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಎಸ್​ಕೆ ಹೆಸರು ತಳುಕುಹಾಕಿಕೊಂಡಿದೆ.

ಸಿಎಸ್‌ಕೆ ಪ್ಲೇಯಿಂಗ್ 11 ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ!
ಸಿಎಸ್​ಕೆ
Image Credit source: IPL

Updated on: Sep 23, 2026 | 8:28 AM

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಮಾಹಿತಿ ಸೋರಿಕೆ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ ಫ್ರಾಂಚೈಸಿ ಕೊನೆಗೂ ಮೌನ ಮುರಿದಿದೆ. ಈ ಸ್ಫೋಟಕ ಆರೋಪಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25, 2026 ರಂದು ನಡೆಯಲಿರುವ ತನ್ನ ವಾರ್ಷಿಕ ಮಹಾಸಭೆಯಲ್ಲಿ ಅಧಿಕೃತ ಕ್ರಮ ಕೈಗೊಳ್ಳಲು ಸಿಎಸ್‌ಕೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಭ್ರಷ್ಟಾಚಾರದ ವಿರುದ್ಧ ಜೀರೋ-ಟಾಲರೆನ್ಸ್ (ಶೂನ್ಯ ಸಹಿಷ್ಣುತೆ) ನೀತಿಯನ್ನು ಹೊಂದಿರುವುದಾಗಿ ತಿಳಿಸಿರುವ ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಲಾಗುವುದು ಎಂದು ಖಚಿತಪಡಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ಮಾಧ್ಯಮ ಸಂಸ್ಥೆಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆ ಈ ಇಡೀ ವಿವಾದಕ್ಕೆ ಕಾರಣವಾಗಿದೆ. ನಾಗಾಲ್ಯಾಂಡ್ ತಂಡದ ಮಾಜಿ ರಣಜಿ ಆಟಗಾರ ರಚಿತ್ ಭಾಟಿಯಾ ಎಂಬಾತ, ತಾನು ಬುಕ್ಕಿಗಳ ಸೋಗಿನಲ್ಲಿದ್ದ ವರದಿಗಾರನ ಬಳಿ 2025ರ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಆಡುವ 11ರ ಬಳಗದ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾಗಿ ಒಪ್ಪಿಕೊಂಡಿರುವ ವೀಡಿಯೊ ಬಹಿರಂಗವಾಗಿತ್ತು. ಲಂಡನ್ ಮೂಲದ ಬುಕ್ಕಿಗಳಿಗೆ ಸ್ನಾಪ್‌ಚಾಟ್ ಮೂಲಕ ಮಾಹಿತಿ ರವಾನಿಸಲಾಗುತ್ತಿತ್ತು ಎಂದು ಆತ ಹೇಳಿಕೊಂಡಿದ್ದನು.

ಕೋಟಿಗಟ್ಟಲೆ ಹಣದ ವ್ಯವಹಾರ:

ಮಾಹಿತಿ ಸೋರಿಕೆಗಾಗಿ ತನಗೆ ಪ್ರತಿ ಪಂದ್ಯಕ್ಕೆ ₹60 ಲಕ್ಷ ಸಿಗುತ್ತಿತ್ತು ಮತ್ತು ಒಟ್ಟು 5 ಪಂದ್ಯಗಳಿಂದ ₹3 ಕೋಟಿಗೂ ಅಧಿಕ ಹಣ ಲಭಿಸಿದೆ ಎಂದು ಭಾಟಿಯಾ ವಿಡಿಯೋದಲ್ಲಿ ಹೇಳಿದ್ದಾನೆ. ಈ ಮಾಹಿತಿಯನ್ನು ನೀಡಲು ಸಿಎಸ್‌ಕೆ ತಂಡದೊಳಗಿನ ಸಕ್ರಿಯ ಆಟಗಾರನೊಬ್ಬನ ಸಂಪರ್ಕ ಇತ್ತು ಎಂದು ಆತ ಹೇಳಿದ್ದರೂ, ಆ ಆಟಗಾರ ಯಾರೆಂಬುದನ್ನು ವರದಿಯಲ್ಲಿ ಬಹಿರಂಗಪಡಿಸಿರಲಿಲ್ಲ.

ವಂಶ್ ಬೇಡಿ ಸ್ಪಷ್ಟನೆ:

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಸ್​ಕೆ ತಂಡದಲ್ಲಿದ್ದ ವಿಕೆಟ್ ಕೀಪರ್-ಬ್ಯಾಟರ್ ವಂಶ್ ಬೇಡಿ ಅವರ ಹೆಸರು ಕೇಳಿಬಂದಾಗ, ಅವರು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು “ಮಾನಹಾನಿಕರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ವಂಶ್ ಬೇಡಿ ಅವರನ್ನು ಸಿಎಸ್​ಕೆ ಐಪಿಎಲ್ 2025 ರಲ್ಲಿ 55 ಲಕ್ಷ ರೂ.ಗೆ ಖರೀದಿಸಿತ್ತು.
  • ಫಿಟ್​ನೆಸ್ ಸಮಸ್ಯೆಯ ಕಾರಣ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಒಂದೇ ಒಂದು ಪಂದ್ಯವಾಡಿರಲಿಲ್ಲ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ನೀಡಿದ ಮಾಹಿತಿ ಪ್ರಕಾರ, ಇತ್ತೀಚೆಗೆ ನಡೆದ 2026ರ ದೆಹಲಿ ಪ್ರೀಮಿಯರ್ ಲೀಗ್ (DPL) ವೇಳೆ ತನಗೆ ಎದುರಾಗಿದ್ದ ಭ್ರಷ್ಟಾಚಾರದ ಪ್ರಯತ್ನವನ್ನು ವಂಶ್ ಬೇಡಿ ಅವರೇ ಖುದ್ದಾಗಿ ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ಘಟಕಕ್ಕೆ ವರದಿ ಮಾಡಿದ್ದರು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: 15 ಪದಕಗಳು ಸಿಕ್ಕರೂ, ಭಾರತದ ಖಾತೆಗೆ ಸೇರಿದ್ದು 1 ಚಿನ್ನದ ಪದಕ ಮಾತ್ರ!

ಸದ್ಯಕ್ಕೆ ಈ ಸ್ಟಿಂಗ್ ಆಪರೇಷನ್ ವರದಿಗಳು ಅಪೂರ್ಣ ಮತ್ತು ದೃಢೀಕರಿಸದ ಮಾಹಿತಿಯನ್ನು ಹೊಂದಿವೆ ಎಂದು ಡಿಡಿಸಿಎ ಹೇಳಿದೆಯಾದರೂ, ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದೆ. ಬಿಸಿಸಿಐ ಇನ್ನು ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸಿಎಸ್‌ಕೆ ಸೆಪ್ಟೆಂಬರ್ 25 ರ ಎಜಿಎಂ ಸಭೆಯಲ್ಲಿ ಕೈಗೊಳ್ಳಲಿರುವ ನಿರ್ಧಾರಗಳು ಈ ವಿವಾದಕ್ಕೆ ಹೊಸ ತಿರುವು ನೀಡಲಿವೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us