CSK Vs GT Final Weather Forecast: ಐಪಿಎಲ್ 2023 ಫೈನಲ್ ಪಂದ್ಯ ನಡೆಯುವುದು ಅನುಮಾನ: ಮ್ಯಾಚ್ ಆಡದೆ ಚಾಂಪಿಯನ್ ಆಗುತ್ತಾ ಹಾರ್ದಿಕ್ ಪಡೆ?
IPL 2023 Final, CSK vs GT: ಸಾಕಷ್ಟು ರೋಚಕತೆ ಸೃಷ್ಟಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್ 2023 ಫೈನಲ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

73 ಪಂದ್ಯಗಳು, 59 ದಿನಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಫೈನಲ್ (IPL 2023 Final) ಹಂತಕ್ಕೆ ಬಂದು ನಿಂತಿದೆ. ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ನಡುವೆ ಐಪಿಎಲ್ 2023 ಫೈನಲ್ನ ರೋಚಕ ಕಾದಾಟ ನಡೆಯಲಿದೆ. 16 ಆವೃತ್ತಿಯ ಐಪಿಎಲ್ನಲ್ಲಿ ಸಿಎಸ್ಕೆ ಇಂದು 10ನೇ ಬಾರಿ ಫೈನಲ್ನಲ್ಲಿ ಕಣಕ್ಕಿಳಿದ ಸಾಧನೆ ಮಾಡಲಿದೆ. ಒಟ್ಟು 9 ಬಾರಿ ಫೈನಲ್ ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂತಿಮ ಪಂದ್ಯದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದರೆ ಹತ್ತು ಫೈನಲ್ಗಳಲ್ಲಿ ಧೋನಿ (MS Dhoni) ಪಡೆ 5 ಬಾರಿ ಸೋಲನುಭವಿಸಿದೆ. ಚೆನ್ನೈ ಗೆದ್ದರೆ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಲಿದೆ. ಸಿಎಸ್ಕೆ ಸೋತರೆ ಗುಜರಾತ್ ಟೈಟಾನ್ಸ್ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆ.
ಆದರೆ, ಸಾಕಷ್ಟು ರೋಚಕತೆ ಸೃಷ್ಟಿಸಿರುವ ಮಾಜಿ ಮತ್ತು ಹಾಲಿ ಚಾಂಪಿಯನ್ನರ ನಡುವಣ ಫೈನಲ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಯಾಕೆಂದರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳ ಆಟಗಾರರ ಜೊತೆಗೆ ಕ್ರಿಕೆಟ್ ಅಭಿಮಾನಿಗಳಿಗೂ ಮಳೆ ಬಗ್ಗೆ ಆತಂಕವಾಗಿದೆ. ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆಯಂತೆ. ದೇಶದ ಪ್ರಸ್ತುತ ಹವಾಮಾನ ವರದಿ ಗಮನಿಸಿದರೆ, ಯಾವುದೇ ಸಮಯದಲ್ಲಿ ಮಳೆಯಾಗಬಹುದು.
ಹವಾಮಾನ ವರದಿಯ ಪ್ರಕಾರ, ಇಂದು ಮೋಡ ಕವಿದ ದಿನವಾಗಿರುತ್ತದೆ, ತಾಪಮಾನವು ಗರಿಷ್ಠ 40 ಡಿಗ್ರಿ ಮತ್ತು ಕನಿಷ್ಠ 28 ಡಿಗ್ರಿಗಳಷ್ಟು ಇರುತ್ತದೆ. ಸಂಜೆ ವೇಳೆಗೆ ಶೇ. 78 ರಷ್ಟು ಮೋಡ ಕವಿದ ವಾತಾವರಣವಿದ್ದು, ಆಟ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮಳೆಯ ಅವಧಿಯು ಸುಮಾರು ಎರಡು ಗಂಟೆಗಳ ಕಾಲ ಇರಲಿದೆ ಎನ್ನಲಾಗಿದೆ. ಒಂದು ವೇಳೆ ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಐಪಿಎಲ್ ರೈನ್ ರೂಲ್ಸ್ ಪ್ರಕಾರವೇ ಪಂದ್ಯ ನಡೆಯಲಿದೆ. ಹಾಗಾದರೆ, ಐಪಿಎಲ್ ಮಳೆಯ ನಿಯಮ ಏನಿದೆ?.
IPL 2023: ಸ್ಟಾರ್ ಆಟಗಾರನ ಸಂಭಾವನೆಗೆ ಕತ್ತರಿ ಹಾಕಿದ CSK
ಫೈನಲ್ಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್ಗಳನ್ನು ಆಡಲಿದೆ. 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು. ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ.
11.56 ರಿಂದ 12.50 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ನಡೆಯಲಿದೆ. ಆದರೆ ಸೂಪರ್ ಓವರ್ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50 ಕ್ಕೆ ಸೂಪರ್ ಓವರ್ ಪಂದ್ಯ ಶುರುವಾಗಲಿದೆ. ಎಲ್ಲಾದರು ಸೂಪರ್ ಓವರ್ ಕೂಡ ನಡೆಸಲು ಸಾಧ್ಯವಾಗದಿದ್ದರೆ ಮಾತ್ರ ಫೈನಲ್ ಪಂದ್ಯವು ರದ್ದಾಗಲಿದೆ. ಒಂದು ವೇಳೆ ಪಂದ್ಯ ರದ್ದಾದರೆ ಲೀಗ್ ಹಂತದ ಪಾಯಿಂಟ್ಸ್ ಟೇಬಲ್ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಲಾಗುತ್ತದೆ. ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




