ಪಾಕಿಸ್ತಾನ್ ತಂಡ ಭಾರತ ವಿರುದ್ಧ ಆಡಲು ಹೆದರುತ್ತಿದ್ದೆ ಅಂದುಕೊಳ್ಳುತ್ತಿದ್ದಾರೆ!

T20 World Cup 2026: ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. 20 ತಂಡಗಳ ನಡುವಣ ಈ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ್ ಒಂದೇ ಗ್ರೂಪ್​ನಲ್ಲಿದೆ. ಆದರೆ ಮೊದಲ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುವುದು ಅನುಮಾನ. ಏಕೆಂದರೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಿಸಿಬಿ ತಿಳಿಸಿದೆ.

ಪಾಕಿಸ್ತಾನ್ ತಂಡ ಭಾರತ ವಿರುದ್ಧ ಆಡಲು ಹೆದರುತ್ತಿದ್ದೆ ಅಂದುಕೊಳ್ಳುತ್ತಿದ್ದಾರೆ!
Pakistan

Updated on: Feb 03, 2026 | 10:54 AM

ಭಾರತದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ನಡೆಯನ್ನು ಪಾಕ್​ನ ಮಾಜಿ ಆಟಗಾರ ದಾನಿಶ್ ಕನೇರಿಯಾ ಖಂಡಿಸಿದ್ದಾರೆ. ಈ ಬಗ್ಗೆ ಖಾಸಗಿ ಚಾನೆಲ್​ ಜೊತೆ ಮಾತನಾಡಿರುವ ಅವರು, ಪಾಕ್​ನ ಈ ನಿರ್ಧಾರದಿಂದ ಎಲ್ಲರೂ ನಮ್ಮ ತಂಡ ಭಾರತದ ವಿರುದ್ಧ ಆಡಲು ಹೆದರುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ್ ತಂಡವು ಭಾರತದಲ್ಲಿ ಆಡಲು ನಿರಾಕರಿಸಿತ್ತು. ಅಲ್ಲದೆ ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸಬೇಕೆಂದು ಬೇಡಿಕೆಯಿಟ್ಟಿದ್ದರು. ಅದರಂತೆ ಇದೀಗ ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಇದೀಗ ಈ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ್ ಹೇಳುತ್ತಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕನೇರಿಯಾ ಹೇಳಿದ್ದಾರೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತೆಗೆದುಕೊಂಡಿರುವ ಈ ನಿರ್ಧಾರದಿಂದ, ಪಾಕಿಸ್ತಾನವು ಭಾರತವನ್ನು ಎದುರಿಸಲು ಹೆದರುತ್ತಿದೆ ಎಂದು ಜನರು ಭಾವಿಸುತ್ತಿದ್ದಾರೆ. ಅಂತಹದೊಂದು ಸಂದೇಶ ರವಾನೆ ಆಗುತ್ತಿದೆ. ಭಯದ ಕಾರಣದಿಂದಲೇ ಅವರು ಆಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಪಿಸಿಬಿ ತನ್ನ ನಿರ್ಧಾರವನ್ನು ಬದಲಿಸಬೇಕೆಂದು ದಾನಿಶ್ ಕನೇರಿಯಾ ಆಗ್ರಹಿಸಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿಯು, ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಬಾಂಗ್ಲಾದೇಶ್​ಗೆ ಬೆಂಬಲವಾಗಿ ಪಂದ್ಯ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದೆ. ಇದರ ಬದಲು ಪಿಸಿಬಿ ತನ್ನದೇ ಆದ ಕ್ರಿಕೆಟ್ ಅಭಿವೃದ್ಧಿಗೆ ಆದ್ಯತೆ ನೀಡಬೇಕು.

ಹೀಗಾಗಿ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ ಕಣಕ್ಕಿಳಿಯಬೇಕು. ಬಹಿಷ್ಕಾರದಂತಹ ನಿರ್ಧಾರದಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಿಂದೆ ಸರಿಯಬೇಕು ಎಂದು ದಾನಿಶ್ ಕನೇರಿಯಾ ಆಗ್ರಹಿಸಿದ್ದಾರೆ.

ಬಹಿಷ್ಕಾರದಿಂದ ಯಾರಿಗೆ ಲಾಭ?

ಪಾಕಿಸ್ತಾನ್ ತಂಡವು ಪಂದ್ಯ ಬಹಿಷ್ಕರಿಸಿದರೆ ಭಾರತ ತಂಡಕ್ಕೆ ಸಂಪೂರ್ಣ 2 ಅಂಕಗಳು ದೊರೆಯಲಿದೆ. ಇದರಿಂದ ಪಾಕಿಸ್ತಾನ್ ತಂಡದ ನೆಟ್ ರನ್ ರೇಟ್ ಮೇಲೆ ಪರಿಣಾಮ ಬೀರಲಿದೆ. ಇದಾಗ್ಯೂ ಐಸಿಸಿ ಹಾಗೂ ಬಿಸಿಸಿಐ ಆದಾಯಕ್ಕೆ ಹೊಡೆತ ನೀಡುವ ಸಲುವಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಪಂದ್ಯ ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ.

ಇದನ್ನೂ ಓದಿ: 19 ಟೀಮ್​ಗಳಲ್ಲಿ ಟೀಮ್ ಇಂಡಿಯಾ 2 ತಂಡಗಳ ವಿರುದ್ಧ ಗೆದ್ದಿಲ್ಲ..!

ಈ ಬೆದರಿಕೆ ಬೆನ್ನಲ್ಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಐಸಿಸಿ ಸೂಚಿಸಿದೆ. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.