IPL 2023: ರವೀಂದ್ರ ಜಡೇಜಾ ಖರೀದಿಗೆ ಮಾಸ್ಟರ್ ಪ್ಲ್ಯಾನ್: ಯಾವ ತಂಡದ ಪಾಲಾಗ್ತಾರೆ ಜಡ್ಡು
Ravindra Jadeja: ಹರಾಜಿಗೂ ಮುನ್ನ ಬೇರೊಂದು ತಂಡಕ್ಕೆ ಮಾರಾಟ ಮಾಡಬಹುದು. ಈ ಆಯ್ಕೆಯ ಮೂಲಕ ಇದೀಗ ಜಡೇಜಾ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ತೆರೆಮರೆಯ ಪ್ರಯತ್ನ ಮಾಡಿದೆ ಎಂದು ವರದಿಯಾಗಿದೆ.
IPL 2023: ಐಪಿಎಲ್ ಸೀಸನ್ 16 ಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ KKR, SRH, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಹೊಸ ಕೋಚ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆಟಗಾರರ ಟ್ರೇಡಿಂಗ್ಗೂ ಕೆಲ ತಂಡಗಳು ಮುಂದಾಗಿವೆ. ಅದರಂತೆ ಎಲ್ಲಾ ತಂಡಗಳ ಮೊದಲ ಟಾರ್ಗೆಟ್ ರವೀಂದ್ರ ಜಡೇಜಾ. ಏಕೆಂದರೆ ಜಡೇಜಾ ಸಿಎಸ್ಕೆ ತಂಡದಿಂದ ಹೊರಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಏಕೆಂದರೆ ಸಿಎಸ್ಕೆ ಫ್ರಾಂಚೈಸಿ ಜೊತೆ ಮುನಿಸಿಕೊಂಡಿರುವ ಜಡ್ಡು, ಮತ್ತೆ ಹಳೆಯ ತಂಡದ ಪರ ಆಡುವುದು ಅನುಮಾನ.
ಹೀಗಾಗಿ ರವೀಂದ್ರ ಜಡೇಜಾ ಅವರ ಖರೀದಿಗೆ ಕೆಲ ತಂಡಗಳು ಆಸಕ್ತಿ ಹೊಂದಿವೆ. ಆದರೆ ಜಡೇಜಾ ಅವರನ್ನು ರಿಲೀಸ್ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಿದ್ಧರಿಲ್ಲ. ಇದಾಗ್ಯೂ ಕೆಲ ತಂಡಗಳು ಜಡೇಜಾ ಅವರನ್ನು ಟ್ರೇಡ್ ಮಾಡಲು ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ.
ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜಡೇಜಾ ಅವರ ಖರೀದಿಗೆ ಸಿಎಸ್ಕೆ ಜೊತೆ ಮಾತುಕತೆ ನಡೆಸಿದೆ. ಆದರೆ ಜಡೇಜಾರನ್ನು ಬಿಡುಗಡೆ ಮಾಡಲು ಸಿಎಸ್ಕೆ ತಂಡ ಒಪ್ಪಿಗೆ ಸೂಚಿಸಿಲ್ಲ. ಅಲ್ಲದೆ ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮನವಿಯನ್ನು ಸಿಎಸ್ಕೆ ತಂಡ ರಿಜೆಕ್ಟ್ ಮಾಡಿದೆ.
ಒಟ್ಟಿನಲ್ಲಿ ಐಪಿಎಲ್ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಜಡೇಜಾ ಅವರನ್ನು ಟ್ರೇಡ್ ಮಾಡಲು ಮುಂದಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಜಡೇಜಾ ಯಾವ ತಂಡದ ಪಾಲಾಗಲಿದ್ದಾರೆ ಕಾದು ನೋಡಬೇಕಿದೆ.
ಏನಿದು ಐಪಿಎಲ್ ಟ್ರೇಡಿಂಗ್?
ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಟ್ರೇಡ್ ಮಾಡುವ ಆಯ್ಕೆ ನೀಡಲಾಗುತ್ತದೆ. ಅಂದರೆ ಎರಡು ಫ್ರಾಂಚೈಸಿಗಳು ಪರಸ್ಪರ ಒಪ್ಪಿ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಅಥವಾ ಒಂದು ಫ್ರಾಂಚೈಸಿಯು ತನ್ನಲ್ಲಿರುವ ಆಟಗಾರರನ್ನು ಹೆಚ್ಚಿನ ಮೊತ್ತಕ್ಕೆ ಬೇರೊಂದು ತಂಡಕ್ಕೆ ಮಾರಾಟ ಮಾಡಬಹುದು. ಇಲ್ಲಿ ಎರಡು ಫ್ರಾಂಚೈಸಿಗಳು ಒಪ್ಪಿದರೆ ಮಾತ್ರ ಟ್ರೇಡ್ ಪ್ರಕ್ರಿಯೆ ನಡೆಯಲಿದೆ.
ಉದಾಹರಣೆಗೆ ಇದೀಗ ಸಿಎಸ್ಕೆ ತಂಡವು ಜಡೇಜಾ ಅವರನ್ನು 16 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರಾಟ ಮಾಡಬಹುದು. ಅಂದರೆ ಇದು ಫ್ರಾಂಚೈಸಿಗಳ ನಡುವಣ ವ್ಯವಹಾರವಾಗಿದೆ. ಹೀಗಾಗಿ ಸಿಎಸ್ಕೆ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಳ್ಳಬಹುದು ಅಥವಾ ಹರಾಜಿಗಾಗಿ ಬಿಡುಗಡೆ ಮಾಡಬಹುದು. ಇದರ ಹೊರತಾಗಿ ಹರಾಜಿಗೂ ಮುನ್ನ ಬೇರೊಂದು ತಂಡಕ್ಕೆ ಮಾರಾಟ ಮಾಡಬಹುದು. ಈ ಆಯ್ಕೆಯ ಮೂಲಕ ಇದೀಗ ಜಡೇಜಾ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ತೆರೆಮರೆಯ ಪ್ರಯತ್ನ ಮಾಡಿದೆ ಎಂದು ವರದಿಯಾಗಿದೆ.
Published On - 3:54 pm, Sat, 24 September 22