IPL 2025: ಸಿಎಸ್‌ಕೆ ತೊರೆದು ಹೊಸ ತಂಡ ಸೇರಿಕೊಂಡ ಡೆವಾಲ್ಡ್ ಬ್ರೆವಿಸ್
DeWald Brevis: ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಡೆವಾಲ್ಡ್ ಬ್ರೆವಿಸ್, ಈಗ ಹ್ಯಾಂಪ್‌ಶೈರ್ T20 ಬ್ಲಾಸ್ಟ್‌ನಲ್ಲಿ ಆಡಲಿದ್ದಾರೆ. ಗಾಯಗೊಂಡ ವೇಗಿಗೆ ಬದಲಿಯಾಗಿ ಸಿಎಸ್‌ಕೆ ಸೇರಿದ ಬ್ರೆವಿಸ್, ಅತ್ಯುತ್ತಮ ಪ್ರದರ್ಶನ ನೀಡಿ ತಂಡದ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ರೆವಿಸ್ ತಮ್ಮ ಐಪಿಎಲ್ ಯಶಸ್ಸನ್ನು ಈ ಲೀಗ್‌ನಲ್ಲೂ ಮುಂದುವರಿಸಲು ಉತ್ಸುಕರಾಗಿದ್ದಾರೆ.

ಜೂನಿಯರ್ ಎಬಿ ಡಿವಿಲಿಯರ್ಸ್ ಎಂದೇ ಜನಪ್ರಿಯರಾಗಿರುವ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ (DeWald Brevis), ಐಪಿಎಲ್ 2025 (IPL 2025) ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಮೆಗಾ ಹರಾಜಿನಲ್ಲಿ ಯಾವುದೇ ತಂಡವು ಅವರನ್ನು ಖರೀದಿಸದಿದ್ದರೂ, ವೇಗದ ಬೌಲರ್ ಗುರ್ಜಾಪ್ನೀತ್ ಸಿಂಗ್ ಸೀಸನ್ ಮಧ್ಯದಲ್ಲಿ ಗಾಯಗೊಂಡ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ರೆವಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬ್ರೆವಿಸ್ ಗಮನಾರ್ಹ ಪ್ರದರ್ಶನ ನೀಡಿದರು. ಗುಜರಾತ್ ಟೈಟನ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ ಬ್ರೆವಿಸ್ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. ಇದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಈಗ ಬ್ರೆವಿಸ್ ಹೊಸ ಪ್ರಯಾಣವನ್ನು ಆರಂಭಿಸಿದ್ದು, ಸಿಕ್ಸರ್ಗಳ ಮಳೆ ಸುರಿಸಲು ಲಂಡನ್ಗೆ ಹಾರಿದ್ದಾರೆ.
ಹ್ಯಾಂಪ್‌ಶೈರ್ ತಂಡ ಸೇರಿಕೊಂಡ ಬ್ರೆವಿಸ್
ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಬ್ರೆವಿಸ್ ಇದೀಗ ಟಿ20 ಬ್ಲಾಸ್ಟ್‌ನಲ್ಲಿ ಭಾಗವಹಿಸಲು ಲಂಡನ್ ತಲುಪಿದ್ದಾರೆ. ಈ ಸೀಸನ್‌ನಲ್ಲಿ ಅವರು ಹ್ಯಾಂಪ್‌ಶೈರ್ ತಂಡದ ಪರ ಆಡಲಿದ್ದಾರೆ. ಈ ಲೀಗ್ ಮೇ 29 ರಿಂದ ಪ್ರಾರಂಭವಾಗಲಿದ್ದು, ಹ್ಯಾಂಪ್‌ಶೈರ್ ತನ್ನ ಮೊದಲ ಪಂದ್ಯವನ್ನು ಮೇ 30 ರಂದು ಎಸೆಕ್ಸ್ ವಿರುದ್ಧ ಆಡಲಿದೆ. ಡೆವಾಲ್ಡ್ ಬ್ರೆವಿಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಸೌತಾಂಪ್ಟನ್ ಮೈದಾನದ ವೀಡಿಯೊವನ್ನು ತೋರಿಸುತ್ತಿದ್ದಾರೆ. ಬ್ರೆವಿಸ್ ಈಗ ಈ ಲೀಗ್‌ನಲ್ಲಿ ತನ್ನ ಐಪಿಎಲ್ ಪ್ರದರ್ಶನವನ್ನು ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.
IPL 2025: ವೇಗದ ಅರ್ಧಶತಕ; ದಾಖಲೆ ಬರೆದ ಡೆವಾಲ್ಡ್ ಬ್ರೆವಿಸ್
ಐಪಿಎಲ್ 2025 ರಲ್ಲಿ ಉತ್ತಮ ಪ್ರದರ್ಶನ
ಸಿಎಸ್‌ಕೆ ವೇಗಿ ಗುರ್ಜಾಪ್ನೀತ್ ಸಿಂಗ್ ಗಾಯಗೊಂಡ ನಂತರ, ಚೆನ್ನೈ ಸೂಪರ್ ಕಿಂಗ್ಸ್ ಡೆವಾಲ್ಡ್ ಬ್ರೆವಿಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಅದರಂತೆ ಸಿಎಸ್‌ಕೆ ಪರ 6 ಪಂದ್ಯಗಳನ್ನು ಆಡಿದ ಬ್ರೆವಿಸ್ 37.50 ಸರಾಸರಿ ಮತ್ತು 180 ಸ್ಟ್ರೈಕ್ ರೇಟ್‌ನಲ್ಲಿ 225 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ.
ಕಳೆದ ಸೀಸನ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು, ಆದರೆ ಕೇವಲ ಮೂರು ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದರು. ಇದರಲ್ಲಿ ಅವರು ಕೇವಲ 69 ರನ್ ಗಳಿಸಲು ಸಾಧ್ಯವಾಯಿತು. ಇದಾದ ನಂತರ, ಈ ಸೀಸನ್ನ ಮೆಗಾ ಹರಾಜಿಗೂ ಮುನ್ನ ಮುಂಬೈ ಅವರನ್ನು ಬಿಡುಗಡೆ ಮಾಡಿತು. 2022 ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಬ್ರೆವಿಸ್ ಆ ಸೀಸನ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ 23 ರ ಸರಾಸರಿಯಲ್ಲಿ 161 ರನ್ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Tue, 27 May 25
