ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ; ವಿರಾಟ್ ನಿವೃತ್ತಿ ಬಗ್ಗೆ DGMO Lt Gen ರಾಜೀವ್ ಘಾಯ್ ಮಾತು
Operation Sindhura Press Conference: ಭಾರತೀಯ ಸೇನೆಯ ಮೂವರು ಅಧಿಕಾರಿಗಳು ಆಪರೇಷನ್ ಸಿಂಧೂರ್ ಕುರಿತು ಸುದ್ದಿಗೋಷ್ಠಿ ನಡೆಸಿದರು. ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ವಿರಾಟ್ ಕೊಹ್ಲಿಯ ನಿವೃತ್ತಿಯನ್ನು ಉಲ್ಲೇಖಿಸಿ, ಪಾಕಿಸ್ತಾನದ ದಾಳಿಯನ್ನು ಎದುರಿಸುವ ಭಾರತದ ಸಾಮರ್ಥ್ಯವನ್ನು ಕ್ರಿಕೆಟ್ ಉದಾಹರಣೆಯ ಮೂಲಕ ವಿವರಿಸಿದರು. ಅವರು ಪಾಕಿಸ್ತಾನದ ದಾಳಿಯನ್ನು ಯಶಸ್ವಿಯಾಗಿ ಎದುರಿಸುತ್ತಿರುವುದಾಗಿ ಹೇಳಿದರು.
ಆಪರೇಷನ್ ಸಿಂಧೂರ್ ಕುರಿತು ಭಾರತದ ಮೂರು ಸೇನಾ ಅಧಿಕಾರಿಗಳು ಇಂದು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತು ಆರಂಭಿಸಿದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮೊದಲಿಗೆ ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಬಗ್ಗೆ ಮಾತನಾಡಿದರು. ಈ ವೇಳೆ ಅವರು, ‘ನಾವು ಇಂದು ಕ್ರಿಕೆಟ್ ಬಗ್ಗೆ ಮಾತನಾಡಬಹುದು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಇಂದು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಎಲ್ಲಾ ಭಾರತೀಯರಂತೆ ನನಗೂ ಕೂಡ ಕೊಹ್ಲಿ ನೆಚ್ಚಿನ ಕ್ರಿಕೆಟಿಗ ಎಂದಿದ್ದಾರೆ.
ಆ ಬಳಿಕ ಪಾಕಿಸ್ತಾನದ ದಾಳಿಯನ್ನು ಹೇಗೆ ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂಬುದನ್ನು ಕ್ರಿಕೆಟ್ ಉದಾಹರಣೆ ನೀಡುವ ಮೂಲಕ ಹೇಳಿದ ಅವರು, ‘70 ರ ದಶಕದಲ್ಲಿ ನನ್ನ ಶಾಲೆಯ ದಿನಗಳಲ್ಲಿ ನಡೆದ ಒಂದು ಘಟನೆ ನನಗೆ ಈಗಲೂ ನೆನಪಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಶಸ್ ಸರಣಿ ನಡೆದಿತ್ತು. ಈ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಇಂಗ್ಲೆಂಡ್, ಆಸ್ಟ್ರೇಲಿಯಾದ ಇಬ್ಬರು ಬೌಲರ್ಗಳ ಮುಂದೆ ದೂಳಿಪಟವಾಗಿತ್ತು. ಇಬ್ಬರು ಆಸೀಸ್ ವೇಗಿಗಳಾದ ಜೆಫ್ ಥಾಮ್ಸನ್ ಮತ್ತು ಡೆನ್ನಿಸ್ ಲಿಲ್ಲಿ ಇಂಗ್ಲಿಷ್ ಬ್ಯಾಟಿಂಗ್ ಲೈನ್ ಅಪ್ ಅನ್ನು ಛಿದ್ರಗೊಳಿಸಿದ್ದರು.
ಜೆಫ್ ಥಾಮ್ಸನ್ ಒಂದು ವೇಳೆ ವಿಕೆಟ್ ತೆಗೆಯುವಲ್ಲಿ ವಿಫಲರಾದರೆ, ಡೆನ್ನಿಸ್ ಲಿಲ್ಲಿ ಇಂಗ್ಲೆಂಡ್ ಬ್ಯಾಟರ್ಗಳ ಹೆಡೆಮುರಿ ಕಟ್ಟುತ್ತಿದ್ದರು. ಅಂದರೆ ಒಬ್ಬರು ವಿಫಲರಾದರೆ, ಮತ್ತೊಬ್ಬರು ಯಶಸ್ಸು ಸಾಧಿಸುತ್ತಿದ್ದರು. ಹಾಗೆಯೇ ನಾವು ಕೂಡ ಪಾಕಿಸ್ತಾನದ ಎಲ್ಲಾ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಒಂದು ಹಂತದಲ್ಲಿ ಪಾಕ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರೆ, ಮತ್ತೊಂದು ಹಂತದಲ್ಲಿ ಅವರ ಎಲ್ಲಾ ಪ್ರಯತ್ನವನ್ನು ಧ್ವಂಸಗೊಳಿಸುತ್ತಿದ್ದೇವೆ ಎಂದು ರಾಜೀವ್ ಘಾಯ್ ಹೇಳಿದರು.

