Duleep Trophy 2023: ಕನ್ನಡಿಗನ ಮಿಂಚಿನ ದಾಳಿಗೆ ತತ್ತರಿಸಿದ ಉತ್ತರ ವಲಯ ತಂಡ
Duleep Trophy 2023: ಪ್ರಥಮ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ವಲಯ ತಂಡ ಕೂಡ ಉತ್ತಮ ಆರಂಭ ಪಡೆದಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 9 ರನ್ಗಳಿಸಿ ಔಟಾದರು.
Duleep Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕನ್ನಡಿಗ ವಿಧ್ವತ್ ಕಾವೇರಪ್ಪ (Vidwath Kaverappa) ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡದ ನಾಯಕ ಹನುಮ ವಿಹಾರಿ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ ಆರಂಭದಲ್ಲೇ ಧ್ರುವ ಶೋರೆ (11) ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಸಾಯಿ ಕಿಶೋರ್ ಪ್ರಶಾಂತ್ ಚೋಪ್ರಾ (5) ಅವರ ವಿಕೆಟ್ ಕಬಳಿಸಿದರು. ನಂತರ ಬಂದ ಅಂಕಿತ್ ಕಲ್ಸಿ (2) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ವಿಧ್ವತ್ ಯಶಸ್ವಿಯಾದರು. ಈ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪ್ರಭ್ಸಿಮ್ರಾನ್ ಸಿಂಗ್ 49 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ಪ್ರಭ್ಸಿಮ್ರಾನ್ ಸಿಂಗ್ ಕ್ರೀಸ್ ಕಚ್ಚಿ ನಿಲ್ಲುವ ಸೂಚನೆ ಸಿಗುತ್ತಿದ್ದಂತೆ ಹನುಮ ವಿಹಾರಿ ಬೌಲಿಂಗ್ ಬದಲಾವಣೆ ತಂದರು. ಈ ಬದಲಾವಣೆ ಫಲ ನೀಡಿತು. ಕೆವಿ ಶಶಿಕಾಂತ್ ಅವರು ಪ್ರಭ್ಸಿಮ್ರಾನ್ ವಿಕೆಟ್ ಪಡೆದು ಮಹತ್ವದ ಯಶಸ್ಸು ತಂದುಕೊಟ್ಟರು. ಈ ವಿಕೆಟ್ ಬೀಳುತ್ತಿದ್ದಂತೆ ಮತ್ತೆ ಮೇಲುಗೈ ಸಾಧಿಸಿದ ದಕ್ಷಿಣ ವಲಯ ತಂಡದ ಬೌಲರ್ಗಳು ಪರಾಕ್ರಮ ಮೆರೆಯಲಾರಂಭಿಸಿದರು.
ಅದರಲ್ಲೂ ಕರ್ನಾಟಕದ ವೇಗಿ ವಿಧ್ವತ್ ಕಾವೇರಪ್ಪ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದರು. ಪರಿಣಾಮ ಉತ್ತರ ವಲಯ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 198 ರನ್ಗಳಿಗೆ ಆಲೌಟ್ ಆಯಿತು.
ದಕ್ಷಿಣ ವಲಯ ಪರ ಕೇವಲ 28 ರನ್ ನೀಡಿ ವಿಧ್ವತ್ ಕಾವೇರಪ್ಪ 5 ವಿಕೆಟ್ ಕಬಳಿಸಿ ಮಿಂಚಿದರೆ, ಕೆವಿ ಶಶಿಕಾಂತ್ 2 ವಿಕೆಟ್ ಪಡೆದರು. ಇನ್ನು ವಿಜಯಕುಮಾರ್ ವೈಶಾಕ್, ಸಾಯಿ ಕಿಶೋರ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇನ್ನು ಪ್ರಥಮ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ವಲಯ ತಂಡ ಕೂಡ ಉತ್ತಮ ಆರಂಭ ಪಡೆದಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 9 ರನ್ಗಳಿಸಿ ಔಟಾದರು. ಇನ್ನು ರವಿಕುಮಾರ್ ಸಮರ್ಥ್ (1) ಹಾಗೂ ನಾಯಕ ಹನುಮ ವಿಹಾರಿ (0) ಬಂದ ವೇಗದಲ್ಲೇ ಹಿಂತಿರುಗಿದರು.
ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಕಿ ಭೂಯಿ ಕೂಡ ಶೂನ್ಯಕ್ಕೆ ಔಟಾದರು. ಪರಿಣಾಮ 35 ರನ್ಗಳಿಸುಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ ತಂಡವು 4 ವಿಕೆಟ್ ಕಳೆದುಕೊಂಡು 63 ರನ್ಗಳಿಸಿದೆ. ಮಯಾಂಕ್ ಅಗರ್ವಾಲ್ (37) ಹಾಗೂ ತಿಲಕ್ ವರ್ಮಾ (12) 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ದಕ್ಷಿಣ ವಲಯ ಪ್ಲೇಯಿಂಗ್ 11: ಹನುಮ ವಿಹಾರಿ (ನಾಯಕ) , ಮಯಾಂಕ್ ಅಗರ್ವಾಲ್ , ಸಾಯಿ ಸುದರ್ಶನ್ , ರಿಕಿ ಭುಯಿ (ವಿಕೆಟ್ ಕೀಪರ್) , ರವಿಕುಮಾರ್ ಸಮರ್ಥ್ , ವಾಷಿಂಗ್ಟನ್ ಸುಂದರ್ , ತಿಲಕ್ ವರ್ಮಾ , ಸಾಯಿ ಕಿಶೋರ್ , ವಿಧ್ವತ್ ಕಾವೇರಪ್ಪ , ವಿಜಯ್ ಕುಮಾರ್ ವೈಶಾಕ್ , ಕೆ ವಿ ಶಶಿಕಾಂತ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗಾಗಿ ಟೀಮ್ ಇಂಡಿಯಾದ 35 ಆಟಗಾರರ ಪಟ್ಟಿ ರೆಡಿ..!
ಉತ್ತರ ವಲಯ ಪ್ಲೇಯಿಂಗ್ 11: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಪ್ರಶಾಂತ್ ಚೋಪ್ರಾ , ಧ್ರುವ ಶೋರೆ , ಅಂಕಿತ್ ಕಲ್ಸಿ , ಜಯಂತ್ ಯಾದವ್ (ನಾಯಕ) , ಅಂಕಿತ್ ಕುಮಾರ್ , ಪುಲ್ಕಿತ್ ನಾರಂಗ್ , ನಿಶಾಂತ್ ಸಿಂಧು , ಬಲ್ತೇಜ್ ಸಿಂಗ್ , ವೈಭವ್ ಅರೋರಾ , ಹರ್ಷಿತ್ ರಾಣಾ.