
ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಝೋನ್ 336 ರನ್ಗಳಿಸಿ ಆಲೌಟ್ ಆಗಿದೆ. ಈ ಆಲೌಟ್ನೊಂದಿಗೆ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 372 ರನ್‌ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಈಸ್ಟ್ ಝೋನ್ ತಂಡ ಪರ ನಾಯಕ ಇಶಾನ್ ಕಿಶನ್ ಕೇವಲ 334 ಎಸೆತಗಳಲ್ಲಿ 270 ರನ್‌ಗಳನ್ನು ಚಚ್ಚಿ ದಾಖಲೆ ಬರೆದಿದ್ದರು. ಇವರಿಗೆ ಭರ್ಜರಿ ಸಾಥ್ ನೀಡಿದ ಕುಮಾರ್ ಕುಶಾಗ್ರ (101 ರನ್) ಶತಕ ಸಿಡಿಸಿದ್ದರು. ಇನ್ನು ಶಿಖರ್ ಮೋಹನ್ (85 ರನ್) ಹಾಗೂ ಅಭಿಮನ್ಯು ಈಶ್ವರನ್ (72 ರನ್) ಅರ್ಧಶತಕಗಳ ಕೊಡುಗೆ ನೀಡಿದ್ದರು. ಈ ಮೂಲಕ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 708 ರನ್ ಕಲೆಹಾಕಿತು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸೌತ್ ಝೋನ್ ಪರ ನಾಯಕ ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅವರು 211 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 99 ರನ್ ಗಳಿಸಿ ಶತಕದ ಸನಿಹದಲ್ಲಿದ್ದರು. ಆದರೆ, ದುರದೃಷ್ಟವಶಾತ್ ಮೊಹಮ್ಮದ್ ಖುರೇಷಿ ಬೌಲಿಂಗ್‌ನಲ್ಲಿ ಅವರಿಗೆ ಕ್ಯಾಚ್ ನೀಡಿ ಕೇವಲ 1 ರನ್‌ನಿಂದ ಶತಕದ ಅವಕಾಶವನ್ನು ಕೈಚೆಲ್ಲಿ ನಿರಾಸೆಯಿಂದ ಪೆವಿಲಿಯನ್ ಸೇರಿದರು.
ಇನ್ನು ಸೌತ್ ಝೋನ್ ತಂಡದ ಪರ ಇತರ ಪ್ರಮುಖ ಬ್ಯಾಟರ್‌ಗಳಾದ ದೇವದತ್ ಪಡಿಕ್ಕಲ್ 62 ರನ್ ಹಾಗೂ ಚಾಮಾ ಮಿಲಿಂದ್ 43 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟಲು ನೆರವಾದರು. ಅಂತಿಮವಾಗಿ ಸೌತ್ ಜೋನ್ 107.3 ಓವರ್‌ಗಳಲ್ಲಿ 336 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಈಸ್ಟ್ ಝೋನ್ ಪರ ಮಿಂಚಿನ ದಾಳಿ ಸಂಘಟಿಸಿದ ಅನುಭವಿ ವೇಗಿ ಮುಕೇಶ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ, ಶಿಖರ್ ಮೋಹನ್ ಹಾಗೂ ಮೊಹಮ್ಮದ್ ಖುರೇಷಿ ತಲಾ 2 ವಿಕೆಟ್ ಕಬಳಿಸಿ ಸೌತ್ ಝೋನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಅದರಂತೆ ಇದೀಗ ಈಸ್ಟ್ ಝೋನ್ ತಂಡವು ಮೊದಲ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಒಟ್ಟು 372 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದಲ್ಲಿ ಕೇವಲ ಒಂದು ದಿನದ ಆಟ ಬಾಕಿ ಉಳಿದಿದ್ದು, ಹೀಗಾಗಿ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಈಸ್ಟ್ ಝೋನ್ (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ, ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.
ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?
ಸೌತ್ ಝೋನ್ (ಪ್ಲೇಯಿಂಗ್ XI): ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ ಮಿಲಿಂದ್, ಎಂಡಿ ನಿಧೀಶ್.