
ಟೀಂ ಇಂಡಿಯಾದ (Team India) ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಇಂಗ್ಲೆಂಡ್ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿದರು. ಜೂನ್ 20 ರಂದು ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ ಶತಕವನ್ನು ಬಾರಿಸಿದರು. ಈ ಮೂಲಕ ಇಂಗ್ಲೆಂಡ್‌ನಲ್ಲಿ ತಾನು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ಯಶಸ್ವಿ ಅವಿಸ್ಮರಣೀಯ ಪ್ರದರ್ಶನ ನೀಡಿದರು. ಆದಾಗ್ಯೂ ಫೀಲ್ಡಿಂಗ್ನಲ್ಲಿ ಜೈಸ್ವಾಲ್ ಭಾರಿ ನಿರಾಶೆ ಮೂಡಿಸಿದರು. ಈ ಪಂದ್ಯದಲ್ಲಿ ಯಶಸ್ವಿ ಒಟ್ಟು 4 ಕ್ಯಾಚ್‌ಗಳನ್ನು ಕೈಬಿಟ್ಟರು. ಜೈಸ್ವಾಲ್ ಈ ನಾಲ್ಕು ಕ್ಯಾಚ್‌ಗಳನ್ನು ಹಿಡಿದಿದ್ದರೆ, ಈ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ ಅಂತಿಮವಾಗಿ ಇಂಗ್ಲೆಂಡ್, ಭಾರತವನ್ನು ಸೋಲಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಇದೀಗ ಜುಲೈ 2 ರಿಂದ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಜೈಸ್ವಾಲ್‌ಗೆ ದೊಡ್ಡ ಸಾಧನೆ ಮಾಡುವ ಅವಕಾಶವಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಯಶಸ್ವಿ ಎರಡು ಸಿಕ್ಸರ್ ಬಾರಿಸಿದರೆ, ನಾಲ್ವರು ಲೆಜೆಂಡರಿ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಲಿದ್ದಾರೆ. ವಾಸ್ತವವಾಗಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 40 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಎರಡನೇ ಟೆಸ್ಟ್‌ನಲ್ಲಿ ಜೈಸ್ವಾಲ್ ಇನ್ನೂ 2 ಸಿಕ್ಸರ್‌ಗಳನ್ನು ಬಾರಿಸಿದರೆ, ಅವರು ಒಂದೇ ಬಾರಿಗೆ ನಾಲ್ವರು ಆಟಗಾರರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಲಿದ್ದಾರೆ. ಆಸ್ಟ್ರೇಲಿಯಾದ ಮಾರ್ಕ್ ವಾ, ಬಾಂಗ್ಲಾದೇಶದ ತಮೀಮ್ ಇಕ್ಬಾಲ್, ವೆಸ್ಟ್ ಇಂಡೀಸ್‌ನ ಡ್ಯಾರೆನ್ ಬ್ರಾವೋ ಮತ್ತು ನ್ಯೂಜಿಲೆಂಡ್‌ನ ಕುಲೀನ್ ಮುನ್ರೊ ಅವರನ್ನು ಮೀರಿಸುವ ಅವಕಾಶ ಯಶಸ್ವಿಗೆ ಇದೆ. ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ತಲಾ 41 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಜೈಸ್ವಾಲ್ ಅಂದಿನಿಂದ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿಪಡಿಸಿಕೊಂಡಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 20 ಪಂದ್ಯಗಳನ್ನಾಡಿರುವ ಜೈಸ್ವಾಲ್ 1,903 ರನ್ ಸಿಡಿಸಿದ್ದು, ಇದರಲ್ಲಿ 10 ಅರ್ಧಶತಕಗಳು ಮತ್ತು 5 ಶತಕಗಳು ಸೇರಿವೆ.
ಯಶಸ್ವಿ ಜೈಸ್ವಾಲ್ ಇದುವರೆಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಒಟ್ಟು 6 ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್ 11 ಇನ್ನಿಂಗ್ಸ್‌ಗಳಲ್ಲಿ 817 ರನ್ ಗಳಿಸಿದ್ದಾರೆ. ಹಾಗೆಯೇ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 2 ದ್ವಿಶತಕಗಳನ್ನು ಸಿಡಿಸಿದ್ದಾರೆ.
IND vs ENG: ಇಂಗ್ಲೆಂಡ್ ತಂಡದ ಆಪತ್ಭಾಂದವ ಜೈಸ್ವಾಲ್; ಡಕೆಟ್ ಕ್ಯಾಚ್ ಬಿಟ್ಟು ಶತಕ ಸಿಡಿಸಲು ನೆರವಾದ ಯಶಸ್ವಿ
ಏತನ್ಮಧ್ಯೆ, ಆತಿಥೇಯ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯಕ್ಕೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊದಲ ಪಂದ್ಯಕ್ಕೆ ಹೋಲಿಸಿದರೆ ಇಂಗ್ಲೆಂಡ್ ಎರಡನೇ ಪಂದ್ಯಕ್ಕೆ ಒಬ್ಬ ಆಟಗಾರನಿಗೆ ಅವಕಾಶ ನೀಡಿದೆ. ವೇಗದ ಬೌಲರ್ ಜೋಫ್ರಾ ಆರ್ಚರ್ ಅವರನ್ನು 15 ಸದಸ್ಯರ ತಂಡದಲ್ಲಿ ಸೇರಿಸಲಾಗಿದೆ. ಇದರೊಂದಿಗೆ, 2021 ರ ನಂತರ ಜೋಫ್ರಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆದ್ದರಿಂದ, ಎರಡನೇ ಪಂದ್ಯಕ್ಕೆ ಆಡುವ ಹನ್ನೊಂದರ ತಂಡದಲ್ಲಿ ಜೋಫ್ರಾಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Sun, 29 June 25