ENG vs SL: 2ನೇ ಟೆಸ್ಟ್​ನಲ್ಲೂ ಇಂಗ್ಲೆಂಡ್ ಭರ್ಜರಿ ಪ್ರದರ್ಶನ

England vs Sri Lanka: ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಆಂಗ್ಲರು ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಮೊದಲೆರಡು ದಿನದಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ.

ENG vs SL: 2ನೇ ಟೆಸ್ಟ್​ನಲ್ಲೂ ಇಂಗ್ಲೆಂಡ್ ಭರ್ಜರಿ ಪ್ರದರ್ಶನ
England
Follow us
|

Updated on: Aug 31, 2024 | 7:27 AM

ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್​ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಢ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಡಾನ್ ಲಾರೆನ್ಸ್ (9) ಬೇಗನೆ ಔಟಾದರೆ, ಆ ಬಳಿಕ ಬಂದ ನಾಯಕ ಒಲೀ ಪೋಪ್ 1 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದ್ದರು. ಇನ್ನು ಬೆನ್ ಡಕೆಟ್ ಬಿರುಸಿನ 40 ರನ್​ಗಳನ್ನು ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಈ ಹಂತದಲ್ಲಿ ಕಣಕ್ಕಿಳಿದ ಜೋ ರೂಟ್ ಆಕರ್ಷಕ ಬ್ಯಾಟಿಂಗ್​ನೊಂದಿಗೆ ಶತಕ ಸಿಡಿಸಿದರು. 206 ಎಸೆತಗಳನ್ನು ಎದುರಿಸಿದ ರೂಟ್ 18 ಫೋರ್​ಗಳೊಂದಿಗೆ 143 ರನ್​ ಬಾರಿಸಿದರು. ಇದರ ನಡುವೆ ಹ್ಯಾರಿಸ್ ಬ್ರೂಕ್ 33 ರನ್ ಬಾರಿಸಿದರೆ, ಜೇಮಿ ಸ್ಮಿತ್ 21 ರನ್​ಗಳ ಕೊಡುಗೆ ನೀಡಿದರು.

ಇನ್ನು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಸ್ ಅಟ್ಕಿನ್ಸನ್ ಚೊಚ್ಚಲ ಶತಕ ಪೂರೈಸುವ ಮೂಲಕ ಬ್ಯಾಟ್ ಮೇಲೆಕ್ಕೆತ್ತಿದರು. 115 ಎಸೆತಗಳನ್ನು ಎದುರಿಸಿದ ಅಟ್ಕಿನ್ಸನ್ 14 ಫೋರ್ ಹಾಗೂ 4 ಭರ್ಜರಿ ಸಿಕ್ಸರ್​ಗಳೊಂದಿಗೆ 118 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 427 ರನ್​ಗಳಿಸಿ ಆಲೌಟ್ ಆಯಿತು. ಶ್ರೀಲಂಕಾ ಪರ ಅಸಿತಾ ಫರ್ನಾಂಡೊ 102 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.

ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್ ವೇಗಿಗಳು ಆಘಾತ ನೀಡಿದ್ದರು. ಸಾಂಘಿಕ ದಾಳಿ ಸಂಘಟಿಸಿದ ಆಂಗ್ಲರು 87 ರನ್​ಗಳಿಗೆ 6 ವಿಕೆಟ್ ಉರುಳಿಸಿದರು. ಇದಾಗ್ಯೂ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಮಿಂದು ಮೆಂಡಿಸ್ 120 ಎಸೆತಗಳಲ್ಲಿ 8 ಫೋರ್ ಹಾಗೂ 3 ಸಿಕ್ಸ್​ನೊಂದಿಗೆ 74 ರನ್ ಬಾರಿಸಿದರು.

ಆದರೆ ಅತ್ಯುತ್ತಮ ದಾಳಿಗೆ ನಲುಗಿದ ಶ್ರೀಲಂಕಾ ತಂಡವು ಅಂತಿಮವಾಗಿ 196 ರನ್​ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಒಲೀ ಸ್ಟೋನ್, ಮ್ಯಾಥ್ಯೂ ಪೋಟ್ಸ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

231 ರನ್​ಗಳ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 231 ರನ್​ಗಳ ಮುನ್ನಡೆ ಪಡೆದಿರುವ ಇಂಗ್ಲೆಂಡ್ ತಂಡವು ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿದೆ. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಡಾನ್ ಲಾರೆನ್ಸ್ ಕೇವಲ 7 ರನ್​ಗಳಿಸಿ ಔಟಾಗಿದ್ದಾರೆ. ಇದಾಗ್ಯೂ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 25 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಬೆನ್ ಡಕೆಟ್ (15) ಹಾಗೂ ಒಲೀ ಪೋಪ್ (2) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ , ಪಾತುಮ್ ನಿಸ್ಸಾಂಕ , ನಿಶಾನ್ ಮದುಷ್ಕ (ವಿಕೆಟ್ ಕೀಪರ್) , ಏಂಜೆಲೊ ಮ್ಯಾಥ್ಯೂಸ್ , ದಿನೇಶ್ ಚಂಡಿಮಾಲ್ , ಧನಂಜಯ ಡಿ ಸಿಲ್ವಾ (ನಾಯಕ) , ಕಮಿಂದು ಮೆಂಡಿಸ್ , ಪ್ರಭಾತ್ ಜಯಸೂರ್ಯ , ಅಸಿತ ಫೆರ್ನಾಂಡೋ , ಲಹಿರು ಕುಮಾರ , ಮಿಲನ್ ಪ್ರಿಯನಾಥ ರತ್ನಾಯಕೆ.

ಇದನ್ನೂ ಓದಿ: IPL 2025: LSG ನಾಯಕತ್ವದಿಂದ ಕೆಎಲ್ ರಾಹುಲ್​ ಕಿಕ್ ಔಟ್?

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಡೇನಿಯಲ್ ಲಾರೆನ್ಸ್ , ಒಲೀ ಪೋಪ್ (ನಾಯಕ) , ಜೋ ರೂಟ್ , ಹ್ಯಾರಿ ಬ್ರೂಕ್ , ಜೇಮೀ ಸ್ಮಿತ್ (ವಿಕೆಟ್ ಕೀಪರ್) ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ಮ್ಯಾಥ್ಯೂ ಪಾಟ್ಸ್ , ಓಲೀ ಸ್ಟೋನ್ , ಶೋಯೆಬ್ ಬಶೀರ್.