IND vs ENG: 41 ವರ್ಷಗಳ ಬರವನ್ನು ನೀಗಿಸಿಕೊಳ್ಳುತ್ತಾ ಇಂಗ್ಲೆಂಡ್? ನಾಗ್ಪುರದಲ್ಲಿ ದಾಖಲೆ ಹೇಗಿದೆ?
India vs England ODI Series 2025: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಇಂಗ್ಲೆಂಡ್ ತಂಡವು 41 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಈ ಸರಣಿಯನ್ನು ಶತಾಯಗತಾಯ ಗೆದ್ದು, ಆ ಬರವನ್ನು ನೀಗಿಸಿಕೊಳ್ಳಲು ಇಂಗ್ಲೆಂಡ್ ಪ್ರಯತ್ನಿಸಲಿದೆ. ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಪ್ರಾರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟಿ20 ಸರಣಿ ಗೆದ್ದಿದ್ದ ಭಾರತ ಇದೀಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಮತ್ತು ಅನಾನುಭವಿ ಆಟಗಾರರ ಮಿಶ್ರಣದೊಂದಿಗೆ ಏಕದಿನ ಸರಣಿಗೆ ಸಜ್ಜಾಗಿದೆ. ಮೊದಲ ಏಕದಿನ ಪಂದ್ಯವು ನಾಗ್ಪುರದ ವಿಸಿಎ (ವಿದರ್ಭ ಕ್ರಿಕೆಟ್ ಅಸೋಸಿಯೇಷನ್) ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಟಿ20 ಸರಣಿ ಸೋತಿರುವ ಇಂಗ್ಲೆಂಡ್ ಏಕದಿನ ಸರಣಿಯ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಈ ಸರಣಿಯನ್ನು ಗೆದ್ದುಕೊಳ್ಳುವುದರೊಂದಿಗೆ ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವುದರೊಂದಿಗೆ 41 ವರ್ಷಗಳ ಏಕದಿನ ಸರಣಿಯ ಬರವನ್ನು ನೀಗಿಸಿಕೊಳ್ಳಲು ಪ್ರಯತ್ನಿಸಲಿದೆ.
41 ವರ್ಷಗಳಿಂದ ಏಕದಿನ ಸರಣಿ ಗೆದ್ದಿಲ್ಲ
ಮೇಲೆ ಹೇಳಿದಂತೆ ಇಂಗ್ಲೆಂಡ್ ತಂಡವು 41 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿಯನ್ನು ಗೆದ್ದಿಲ್ಲ. ಇಂಗ್ಲೆಂಡ್ ತಂಡವು ಭಾರತದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿಯನ್ನು ಗೆದ್ದಿದ್ದು 1984 ರಲ್ಲಿ. ಉಭಯ ತಂಡಗಳ ನಡುವೆ ನಡೆದಿದ್ದ 5 ಪಂದ್ಯಗಳ ಏಕದಿನ ಸರಣಿಯನ್ನು ಇಂಗ್ಲೆಂಡ್ 4-1 ಅಂತರದಿಂದ ಗೆದ್ದುಕೊಂಡಿತ್ತು. ಆ ಬಳಿಕ ನಡೆದಿದ್ದ ಏಕದಿನ ಸರಣಿಗಳಲ್ಲಿ ಕೆಲವು ಸರಣಿಗಳು ಡ್ರಾದಲ್ಲಿ ಅಂತ್ಯಗೊಂಡಿದ್ದರೆ, ಉಳಿದ ಸರಣಿಗಳನ್ನು ಭಾರತ ಗೆದ್ದುಕೊಂಡಿದೆ. ಇನ್ನು ಉಭಯ ತಂಡಗಳ ನಡುವೆ 2021 ರಲ್ಲಿ ಕೊನೆಯ ಏಕದಿನ ಸರಣಿ ಭಾರತದಲ್ಲಿ ನಡೆದಿತ್ತು. ಆ ಸರಣಿಯನ್ನು ಸಹ ಭಾರತ ತಂಡವು 2-1 ಅಂತರದಿಂದ ಗೆದ್ದುಕೊಂಡಿತ್ತು.
ಮೊದಲ ಬಾರಿಗೆ ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ನಾಗ್ಪುರದ ಮೈದಾನದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಭಾರತಕ್ಕೆ ಈಗಾಗಲೇ ಈ ಕ್ರೀಡಾಂಗಣದಲ್ಲಿ ಆಡಿದ ಅನುಭವ ಇರುವುದರಿಂದ ಇಂಗ್ಲೆಂಡ್‌ಗೆ ಕೊಂಚ ಹಿನ್ನಡೆಯುಂಟಾಗಲಿದೆ. ಈ ಕ್ರೀಡಾಂಗಣದಲ್ಲಿ ಭಾರತ ತಂಡ ಆಡಿರುವ 6 ಏಕದಿನ ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ.
ಉಭಯ ತಂಡಗಳು
ಏಕದಿನ ಸರಣಿಗೆ ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಜೇಮೀ ಓವರ್ಟನ್, ಸಾಕಿಬ್ ಮಹಮೂದ್, ಜೇಮೀ ಸ್ಮಿತ್, ಜೋಫ್ರಾ ಆರ್ಚರ್.
ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಯಶಸ್ವಿ ಜೈಸ್ವಾಲ್, ವರುಣ್ ಚಕ್ರವರ್ತಿ, ಕೆಎಲ್ ರಾಹುಲ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:30 pm, Wed, 5 February 25