IND vs ENG: ನಿವೃತ್ತಿಯ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ ರೋಹಿತ್ ಶರ್ಮಾ; ಏನು ಹೇಳಿದ್ರು ನೀವೇ ನೋಡಿ
Rohit Sharma Press Conference: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಗೆ ಮುನ್ನ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ರೋಹಿತ್ಗೆ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ರೋಹಿತ್, ತಮ್ಮ ಭವಿಷ್ಯದ ಯೋಜನೆಗಳನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಕೂಡ ತಿಂಗಳಿನ ನಂತರ ಕ್ರಿಕೆಟ್ ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಕೆಲವು ತಿಂಗಳಿಂದ ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು ಈ ಪಂದ್ಯಕ್ಕೂ ಮುನ್ನ ಭಾರತದ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳಿ ರೋಹಿತ್ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರ ಏನು ಎಂಬುದರ ವಿವರ ಇಲ್ಲಿದೆ.
ನಿವೃತ್ತಿಯ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವೇನು?
ವಾಸ್ತವವಾಗಿ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದಾಗ್ಯೂ ಪತ್ರಕರ್ತರ ಪ್ರಶ್ನೆಗೆ ನಯವಾಗಿಯೇ ಉತ್ತರಿಸಿದ ರೋಹಿತ್, ‘ಪ್ರಸ್ತುತ ಮೂರು ಏಕದಿನ ಪಂದ್ಯಗಳು ಮತ್ತು ಚಾಂಪಿಯನ್ಸ್ ಟ್ರೋಫಿ ನಡೆಯಲಿರುವಾಗ, ನನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುವುದು ಇದು ಸೂಕ್ತ ಸಮಯವಲ್ಲ. ನನ್ನ ಭವಿಷ್ಯದ ಬಗ್ಗೆ ಹಲವು ವರ್ಷಗಳಿಂದ ಸಾಕಷ್ಟು ವರದಿಗಳನ್ನು ಮಾಡಲಾಗಿದೆ. ಆದರೆ ಆ ವರದಿಗಳ ಬಗ್ಗೆ ಸ್ಪಷ್ಟನೇ ನೀಡಲು ನಾನು ಇಲ್ಲಿಗೆ ಬಂದಿಲ್ಲ. ಸದ್ಯಕ್ಕೆ ನನಗೀಗ ಈ ಮೂರು ಪಂದ್ಯಗಳು ಮತ್ತು ಚಾಂಪಿಯನ್ಸ್ ಟ್ರೋಫಿ ಬಹಳ ಮುಖ್ಯ. ನನ್ನ ಗಮನ ಈ ಪಂದ್ಯಗಳ ಮೇಲೆ ಇದ್ದು, ಆ ನಂತರ ಏನಾಗುತ್ತದೆ ಎಂದು ನೋಡುತ್ತೇನೆ ಎಂದರು.
#TeamIndia captain Rohit Sharma is ready to take fresh guard ahead of the ODI series against England@IDFCFIRSTBank | @ImRo45 | #INDvENG pic.twitter.com/DJVZju0LOV
— BCCI (@BCCI) February 5, 2025
ಮುಂದುವರೆದು ಮಾತನಾಡಿದ ಅವರು, ‘ಇದು ಬೇರೆಯದೇ ಸ್ವರೂಪ, ಬೇರೆಯದೇ ಸಮಯ. ಕ್ರಿಕೆಟಿಗರ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತಗಳಿರುತ್ತವೆ. ನನ್ನ ವೃತ್ತಿಜೀವನದಲ್ಲಿ ನಾನು ಅವುಗಳನ್ನು ಬಹಳಷ್ಟು ಎದುರಿಸಿದ್ದೇನೆ. ಇದು ನನಗೆ ಹೊಸದೇನಲ್ಲ. ಪ್ರತಿ ದಿನವೂ ಹೊಸ ದಿನ, ಪ್ರತಿ ಸರಣಿಯೂ ಹೊಸ ಸರಣಿ ಎಂದು ನಮಗೆ ತಿಳಿದಿದೆ. ನಾನು ಸವಾಲನ್ನು ಎದುರು ನೋಡುತ್ತಿದ್ದು, ಈ ಹಿಂದೆ ಏನಾಗಿದೆ ಎಂಬುದರ ಮೇಲೆ ಗಮನಹರಿಸಲು ಹೋಗುವುದಿಲ್ಲ. ಈ ಸರಣಿಯನ್ನು ನಾನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ವಿಕೆಟ್ ಕೀಪರ್ ಯಾರು?
ವಾಸ್ತವವಾಗಿ ಈ ಸರಣಿಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಈ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯನ್ನು ರೋಹಿತ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ರೋಹಿತ್, ‘ಕಳೆದ ಹಲವು ವರ್ಷಗಳಿಂದ ಕೆಎಲ್ ರಾಹುಲ್ ಏಕದಿನ ಮಾದರಿಯಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದು, ಉತ್ತಮ ಪ್ರದರ್ಶನ ಕೂಡ ನೀಡಿದ್ದಾರೆ. ಕಳೆದ 10-15 ಏಕದಿನ ಪಂದ್ಯಗಳನ್ನು ನೋಡಿದರೆ, ತಂಡವು ಅವರಿಂದ ಏನನ್ನು ನಿರೀಕ್ಷಿಸಿತ್ತೋ ಅದನ್ನು ಅವರು ಮಾಡಿದ್ದಾರೆ.
ಇದೀಗ ರಿಷಭ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಕೊಡುವ ಆಯ್ಕೆ ನಮಗಿದೆ. ಇಬ್ಬರೂ ಸ್ವಂತ ಬಲದಿಂದ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ರಾಹುಲ್ ಮತ್ತು ರಿಷಭ್ ನಡುವೆ ಯಾರನ್ನು ಆಡಿಸಬೇಕೆಂಬುದು ದೊಡ್ಡ ತಲೆನೋವಾಗಲಿದೆ. ಆದರೆ ಹಿಂದಿನ ಪ್ರದರ್ಶನಗಳನ್ನು ಗಮನಿಸಿದರೆ, ಸ್ಥಿರತೆಯನ್ನು ಕಾಯ್ದುಕೊಳ್ಳುವುದು ನಮಗೆ ಬಹಳ ಮುಖ್ಯ ಎಂದು ರೋಹಿತ್ ಹೇಳಿದ್ದಾರೆ. ರೋಹಿತ್ ಹೇಳಿದ್ದನ್ನು ಗಮನಿಸಿದರೆ, ಕೆಎಲ್ ರಾಹುಲ್ ಆಡುವುದು ಖಚಿತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ