Explained: ಟಿ20 ವಿಶ್ವಕಪ್​ನಲ್ಲಿ ಧೋನಿಯ ಮಾರ್ಗದರ್ಶನ ಟೀಮ್ ಇಂಡಿಯಾಗೆ ಹೇಗೆ ನೆರವಾಗಲಿದೆ?

TV9 Digital Desk

| Edited By: Zahir Yusuf

Updated on: Sep 09, 2021 | 4:08 PM

T20 World Cup: ಟಿ20 ವಿಶ್ವಕಪ್ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಹಾಯಕ ಸಿಬ್ಬಂದಿಯ ಅವಧಿ ಮುಕ್ತಾಯವಾಗಲಿದೆ. ಶಾಸ್ತ್ರಿಯೊಂದಿಗೆ ಒಪ್ಪಂದಗಳನ್ನು ನವೀಕರಿಸಲು ಬಿಸಿಸಿಐ ಆಸಕ್ತಿ ಹೊಂದಿಲ್ಲ.

Explained: ಟಿ20 ವಿಶ್ವಕಪ್​ನಲ್ಲಿ ಧೋನಿಯ ಮಾರ್ಗದರ್ಶನ ಟೀಮ್ ಇಂಡಿಯಾಗೆ ಹೇಗೆ ನೆರವಾಗಲಿದೆ?
ಏಕೆಂದರೆ ಧೋನಿ ನಿವೃತ್ತರಾಗುವ ಮುನ್ನವೇ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಾಗಿತ್ತು. ಆ ಬಳಿಕ ಧೋನಿ 2 ವರ್ಷಗಳ ಕಾಲ ಸೀಮಿತ ಓವರ್​ ಕ್ರಿಕೆಟ್ ಆಡಿದ್ದರು. ಅಂದರೆ ಧೋನಿ 2 ವರ್ಷಗಳ ಕಾಲ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದರು. ಇದೀಗ ಹೊಸ ಜವಾಬ್ದಾರಿ ನೀಡಿ ಕರೆಸಿಕೊಂಡಿರುವುದು ಯಾಕೆ ಎಂದು ಅಜಯ್ ಜಡೇಜಾ ಪ್ರಶ್ನಿಸಿದ್ದಾರೆ.

ಟಿ20 ವಿಶ್ವಕಪ್​ಗಾಗಿ (T20 World Cup 2021) ಪ್ರಕಟಿಸಲಾದ ಬಳಗದಲ್ಲಿ ಟೀಮ್ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ಸ್ಥಾನ ನೀಡಲಾಗಿದೆ. ಬಿಸಿಸಿಐ (BCCI) ಎಂಎಸ್​ಡಿಯನ್ನು ತಂಡದ ಮಾರ್ಗದರ್ಶಕರನ್ನಾಗಿ ಆಯ್ಕೆ ಮಾಡಿದ್ದು, ಇದರೊಂದಿಗೆ ಎರಡು ವರ್ಷಗಳ ಬಳಿಕ ಭಾರತ ತಂಡಕ್ಕೆ ಧೋನಿ ಮತ್ತೆ ಮರಳಿದ್ದಾರೆ. ಇದರ ಬೆನ್ನಲ್ಲೇ ಧೋನಿಯ ಆಯ್ಕೆ ಯಾಕೆ ಎಂಬ ಪ್ರಶ್ನೆ ಕೂಡ ಹಲವರಲ್ಲಿದೆ. ಏಕೆಂದರೆ ಈಗಾಗಲೇ ಯಶಸ್ವಿ ಕೋಚ್ ಎನಿಸಿಕೊಂಡಿರುವ ರವಿ ಶಾಸ್ತ್ರಿ ತಂಡದಲ್ಲಿರುವಾಗ ಮಾರ್ಗದರ್ಶಕರ ಅಗತ್ಯವಿದೆಯೇ ಎಂಬ ಪಶ್ನೆಗಳು ಮೂಡಿವೆ. ಆದರೆ ಬಿಸಿಸಿಐ ಧೋನಿಯನ್ನು ಆಯ್ಕೆ ಮಾಡಿರುವುದು ಕೇವಲ ಟಿ20 ವಿಶ್ವಕಪ್​ಗಾಗಿ ಮಾತ್ರವಲ್ಲ ಎಂಬುದು ಸ್ಪಷ್ಟ. ಏಕೆಂದರೆ ಚುಟುಕು ಕ್ರಿಕೆಟ್ ಕದನದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ಕಾರ್ಯಾವಧಿ ಮುಗಿಯಲಿದೆ. ಆ ಬಳಿಕ ತಂಡಕ್ಕೆ ಉತ್ತಮ ಕೋಚ್ ಅಗತ್ಯವಂತು ಇದೆ. ಆ ಸ್ಥಾನದಲ್ಲಿ ಧೋನಿ ಕೂರಿಸಲು ಬಿಸಿಸಿಐ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಷ್ಟಕ್ಕೂ ಧೋನಿಯೇ ಯಾಕೆ? ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಮಹೇಂದ್ರ ಸಿಂಗ್. ಧೋನಿ ನಾಯಕರಾಗಿದ್ದ ವೇಳೆ ಟೀಮ್ ಇಂಡಿಯಾ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿತ್ತು. ಆ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್​ನಲ್ಲಿ ಎಡವಿದರೆ, 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮಿ ಫೈನಲ್​ನಲ್ಲಿ ಮುಗ್ಗರಿಸಿತ್ತು. ಇನ್ನು ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಭಾರತ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ದ ಮಂಡಿಯೂರಿತು. ಅಂದರೆ ಕಳೆದ 8 ವರ್ಷಗಳಿಂದ ಯಾವೊಂದು ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿಲ್ಲ. ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಬಹುತೇಕರು ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ತಂಡ ಬಲಿಷ್ಠವಾಗಿದ್ದರೂ ಯುವ ಆಟಗಾರರಿಗೆ ಮಾರ್ಗದರ್ಶನದ ಅಗತ್ಯವಿದೆ.

ಅದರಲ್ಲೂ ಯುಎಇನಲ್ಲಿ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಅನುಭವಕ್ಕೆ ಮಣೆ ಹಾಕಬೇಕಾಗುತ್ತದೆ. ಆದರೆ ಟಿ20 ಕ್ರಿಕೆಟ್​ನಲ್ಲಿ ಹಿರಿಯ ಆಟಗಾರರಿಗೆ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ. ಈ ಕೊರತೆಯನ್ನು ನೀಗಿಸುವ ಸಲುವಾಗಿ ಬಿಸಿಸಿಐ ಮಹೇಂದ್ರ ಸಿಂಗ್ ಧೋನಿಯನ್ನು ತಂಡದ ಮೆಂಟರ್ ಆಗಿ ಆಯ್ಕೆ ಮಾಡಿದ್ದಾರೆ. ಧೋನಿ ಅವರ ತಂತ್ರಗಾರಿಕೆ, ಅನುಭವ ತಂಡದ ನೆರವಿಗೆ ಬರುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಐಪಿಎಲ್​ನ ಉಳಿದ ಪಂದ್ಯಗಳು ಕೂಡ ಯುಎಇನಲ್ಲಿ ಜರಗುತ್ತಿದೆ. ಇದು ಕೂಡ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಸಿಎಸ್​ಕೆ ತಂಡವನ್ನು ಧೋನಿ ಮುನ್ನಡೆಸುತ್ತಿದ್ದು, ಇದರಿಂದ ಪಿಚ್ ಹೇಗಿದೆ, ಯಾರನ್ನು ಆಡಿಸುವುದು ಉತ್ತಮ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ಧೋನಿ ಬಳಿ ಇರಲಿದೆ. ಈ ತಂತ್ರಗಾರಿಕೆ ಕೂಡ ಕಣಕ್ಕಿಳಿಯುವ ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರಲಿದೆ.

ಇನ್ನು ಆಯ್ಕೆ ಸಮಿತಿಯು ಐದು ಸ್ಪಿನ್ನರ್‌ಗಳನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಅದರಲ್ಲೂ ಒಂದು ಕಾಲದಲ್ಲಿ ಧೋನಿಯ ಟ್ರಂಪ್ ಕಾರ್ಡ್ ಆಗಿದ್ದ ಆರ್​. ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುಎಇ ಪಿಚ್​ಗಳು ಸ್ಪಿನ್ನರ್​ಗಳಿಗೆ ಅನುಕೂಲಕರವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಧೋನಿ, ಐಪಿಎಲ್ ಸಮಯದಲ್ಲಿ ಮತ್ತು ಸೀಮಿತ ಓವರ್‌ಗಳ ಹೂಡುವ ತಂತ್ರಗಾರಿಕೆಯನ್ನು ಡಗ್‌ಔಟ್‌ನಲ್ಲಿ ಕೂತು ಹೆಣೆಯಬಹುದು. ಯಾವ ಸಮಯದಲ್ಲಿ ಏನು ಬದಲಾವಣೆ ಮಾಡಿಕೊಳ್ಳಬೇಕೆಂದು ಟೀಮ್ ಇಂಡಿಯಾ ನಾಯಕನಿಗೆ ಸಂದೇಶ ರವಾನಿಸಬಹುದು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸುವಲ್ಲಿಯೂ ಮೆಂಟರ್ ಪ್ರಮುಖ ಪಾತ್ರವಹಿಸಬಹುದು.

ಇನ್ನು ಚುಟುಕು ಕ್ರಿಕೆಟ್​ ಕದನದ ಬಗ್ಗೆ ಮಾತ್ರ ನೋಡುವುದಾದರೆ, ಧೋನಿ ನಾಯಕತ್ವದಲ್ಲಿ ಟಿ20ಯಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ಇದು ಐಪಿಎಲ್​ಗೂ ಅನ್ವಯವಾಗುತ್ತದೆ. ಏಕೆಂದರೆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಇದುವರೆಗೆ ಕಪ್ ಗೆದ್ದಿಲ್ಲ. ಮತ್ತೊಂದೆಡೆ, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇತ್ತ ಕೊಹ್ಲಿ ಟೆಸ್ಟ್​ ಕ್ರಿಕೆಟ್​ ನಾಯಕತ್ವದಲ್ಲಿ ಯಶಸ್ವಿಯಾಗುತ್ತಿದ್ದರೂ ಟಿ20 ಕ್ರಿಕೆಟ್​ನಲ್ಲಿ ಎಡವುತ್ತಿದ್ದಾರೆ. ಇದಕ್ಕೆ ಒಂದು ಕಾರಣ ತ್ವರಿತ ನಿರ್ಧಾರಗಳ ವೈಫಲ್ಯ ಎನ್ನಬಹುದು. ಏಕೆಂದರೆ ಟಿ20 ಕ್ರಿಕೆಟ್​ನಲ್ಲಿ ಸಂದರ್ಭಕ್ಕೆ ತಕ್ಕಂತೆ ನಾಯಕನ ನಿರ್ಧಾರಗಳು ಬದಲಾಗಬೇಕು. ಹಾಗೆ ನೋಡಿದರೆ, ಕ್ಷಣ ಮಾತ್ರದಲ್ಲಿ ನಿರ್ಧಾರ ಬದಲಿಸಿ ಯಶಸ್ಸು ಪಡೆಯುವ ಚಾಕಚಕ್ಯತೆ ಹೊಂದಿರುವ ಆಟಗಾರ ಧೋನಿ. ಹೀಗಾಗಿ ಮಾರ್ಗದರ್ಶಕನ ಹುದ್ದೆಯಲ್ಲಿ ಧೋನಿ ಡಗೌಟ್​ನಲ್ಲಿದ್ದರೂ ಅದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ.

ಬಿಸಿಸಿಐ ಮಾಸ್ಟರ್ ಪ್ಲ್ಯಾನ್: ಟಿ20 ವಿಶ್ವಕಪ್ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಅವರ ಸಹಾಯಕ ಸಿಬ್ಬಂದಿಯ ಅವಧಿ ಮುಕ್ತಾಯವಾಗಲಿದೆ. ಶಾಸ್ತ್ರಿಯೊಂದಿಗೆ ಒಪ್ಪಂದಗಳನ್ನು ನವೀಕರಿಸಲು ಬಿಸಿಸಿಐ ಆಸಕ್ತಿ ಹೊಂದಿಲ್ಲ. ಇನ್ನು ಟೀಮ್ ಇಂಡಿಯಾದಲ್ಲಿರುವ ಬಹುತೇಕ ಆಟಗಾರರು ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ ಆಡಿದ ಆಟಗಾರರು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2023 ರಲ್ಲಿ ಭಾರತ ಏಕದಿನ ವಿಶ್ವಕಪ್​ಗೆ ಆತಿಥ್ಯವಹಿಸಲಿದೆ. ಇದಕ್ಕಾಗಿ ಈಗಲೇ ಒಂದು ಬಲಿಷ್ಠ ತಂಡವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದರಂತೆ ಪ್ರಮುಖ ಐಸಿಸಿ ಟೂರ್ನಮೆಂಟ್‌ಗೆ ಮುಂಚೆಯೇ ಹೊಸ ಹುದ್ದೆಯನ್ನು ಸೃಷ್ಟಿಸುವ ಮೂಲಕ ಬಿಸಿಸಿಐ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ಪ್ಲ್ಯಾನ್ ಯಶಸ್ವಿಯಾದರೆ ಬಿಸಿಸಿಐ ಧೋನಿಯನ್ನೇ ಕೋಚ್ ಆಗಿ ಮುಂದುವರೆಸುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಇದನ್ನೂ ಓದಿ:  MS Dhoni: 3 ವಿಶ್ವಕಪ್​ ಮೇಲೆ ಬಿಸಿಸಿಐ ಕಣ್ಣು: ಟೀಮ್ ಇಂಡಿಯಾದ ಮುಂದಿನ ಕೋಚ್ ಧೋನಿ?

ಇದನ್ನೂ ಓದಿ: ವಿಚ್ಛೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾದ ಭಾರತೀಯ ಕ್ರಿಕೆಟಿಗರು ಇವರೇ

ಇದನ್ನೂ ಓದಿ: Shardul Thakur: ಮುಂಬೈ ಲೋಕಲ್ ಟ್ರೈನ್ ಹುಡುಗ ಇದೀಗ ಟೀಮ್ ಇಂಡಿಯಾ ಸೆನ್ಸೇಷನ್

ಇದನ್ನೂ ಓದಿ: IPL 2022: ಐಪಿಎಲ್​ನ 2 ಹೊಸ ತಂಡಗಳಿಗಾಗಿ 6 ನಗರಗಳ ಆಯ್ಕೆ

(Explained: How will mentor Dhoni help India’s prospects at T20 World Cup?)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada